ಐದು ರಾಜ್ಯಗಳ ಚುನಾವಣೆ: ಏಪ್ರಿಲ್ 9ರಿಂದ ಮತದಾನ, ಮೇ 4ರಂದು ಫಲಿತಾಂಶ

ನವದೆಹಲಿ: ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಭಾರತ ಚುನಾವಣಾ ಆಯೋಗ (Election Commission of India) ಪ್ರಕಟಿಸಿದೆ. ಜ್ಞಾನೇಶ್ ಕುಮಾರ್ (Gyanesh Kumar) ನೇತೃತ್ವದ ಆಯೋಗ ಪತ್ರಿಕಾಗೋಷ್ಠಿಯಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಏಪ್ರಿಲ್ 9ರಿಂದ 29ರವರೆಗೆ ಮತದಾನ ನಡೆಯಲಿದೆ. ಮೇ 4ರಂದು ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದಿದ್ದಾರೆ.
ತಮಿಳುನಾಡು (Tamil Nadu), ಪಶ್ಚಿಮ ಬಂಗಾಳ (West Bengal), ಕೇರಳ (Kerala), ಅಸ್ಸಾಂ (Assam) ರಾಜ್ಯಗಳು ಹಾಗೂ ಪುದುಚೆರಿ (Puducherry) ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ನಡೆಯಲಿವೆ.
ಅಸ್ಸಾಂ, ಕೇರಳ ಹಾಗೂ ಪುದುಚೆರಿಯಲ್ಲಿ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಪಶ್ಚಿಮ ಬಂಗಾಳದಲ್ಲಿ ಕೆಲವು ಪ್ರದೇಶಗಳು ಹಿಂಸಾಚಾರಕ್ಕೆ ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ಏಪ್ರಿಲ್ 23ರಂದು, ಎರಡನೇ ಹಂತದ ಮತದಾನ ಏಪ್ರಿಲ್ 29ರಂದು ನಡೆಯಲಿದೆ.
- ಪಶ್ಚಿಮ ಬಂಗಾಳ – 294 ಕ್ಷೇತ್ರಗಳು: ಏಪ್ರಿಲ್ 23 ಮತ್ತು 29 ರಂದು ಮತದಾನ.
- ತಮಿಳುನಾಡು – 234 ಕ್ಷೇತ್ರಗಳು: ಏಪ್ರಿಲ್ 23 ರಂದು ಮತದಾನ.
- ಅಸ್ಸಾಂ – 126 ಕ್ಷೇತ್ರಗಳು: ಏಪ್ರಿಲ್ 9 ರಂದು ಮತದಾನ.
- ಕೇರಳ – 140 ಕ್ಷೇತ್ರಗಳು: ಏಪ್ರಿಲ್ 9 ರಂದು ಮತದಾನ.
- ಪುದುಚೆರಿ – 30 ಕ್ಷೇತ್ರಗಳು: ಏಪ್ರಿಲ್ 9 ರಂದು ಮತದಾನ.
ಈ ಐದು ಪ್ರದೇಶಗಳಲ್ಲಿನ ಮತದಾನ ಪೂರ್ಣಗೊಂಡ ಬಳಿಕ ಮೇ 4ರಂದು ಮತ ಎಣಿಕೆ ನಡೆಸಿ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ದಿನಾಂಕ ಘೋಷಣೆಯೊಂದಿಗೆ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ.
