ಬಿಜೆಪಿ-ಸಂಘ ಪರಿವಾರದವರೂ ಭೂಮಿ ಹಿಂದಿರುಗಿಸುವರೇ?: ಮಂಜುನಾಥ್ ಭಂಡಾರಿ ಪ್ರಶ್ನೆ

ಬೆಂಗಳೂರು: ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ನಿಯಮಾನುಸಾರ ಹಂಚಿಕೆಯಾಗಿದ್ದ 5 ಎಕರೆ ಜಮೀನನ್ನು ಸರ್ಕಾರಕ್ಕೆ ಹಿಂದಿರುಗಿಸುವ ಮೂಲಕ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅವರು ಇತರರಿಗೆ ಆದರ್ಶರಾಗಿದ್ದಾರೆ. ಈಗ ಬಿಜೆಪಿ ಮತ್ತು RSSನವರು ತಮಗೆ ಹಂಚಿಕೆಯಾಗಿದ್ದ ಜಮೀನು ಮತ್ತು ನಿವೇಶನಗಳನ್ನು ಹಿಂದುರುಗಿಸುವ ಮೂಲಕ ಆದರ್ಶರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದ್ದಾರೆ.

ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, 5 ದಶಕಗಳಿಗೂ ಅಧಿಕ ಕಾಲ ಪರಿಶುದ್ಧ ರಾಜಕೀಯ ಜೀವನ ನಡೆಸಿಕೊಂಡು ಬಂದಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪ ಕೇಳಿಬರುತ್ತಿದ್ದಂತೆ ರಾಹುಲ್ ಖರ್ಗೆ ಅವರು, ನ್ಯಾಯಬದ್ಧವಾಗಿ ಲಭ್ಯವಾಗಿರುವ ಜಮೀನನ್ನು ಹಿಂದಿರುಗಿಸಿ ಮೇಲ್ಪಂಕ್ತಿ ಹಾಕಿದ್ದಾರೆ. ಹೀಗಾಗಿ ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡಬಾರದು. ಅಲ್ಲದೆ ಉದ್ದೇಶ ಪೂರ್ವಕವಾಗಿ ವಿವಾದಕ್ಕೆ ಸಿಲುಕಿಸುವ ಪ್ರಯತ್ನವನ್ನು ಮಾಡುತ್ತಿರುವ ಪ್ರತಿಪಕ್ಷಗಳು ಇನ್ನು ಮುಂದಾದರೂ ಇಂಥ ಕೃತ್ಯದಿಂದ ಹಿಂದೆ ಸರಿಯಬೇಕು ಎಂದಿದ್ದಾರೆ.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಶಿಕ್ಷಣ ಸಂಸ್ಥೆ ಸ್ಥಾಪಿಸುವುದಾಗಿ ಕರ್ನಾಟಕ ಹೌಸಿಂಗ್ ಬೋರ್ಡ್ ನಿಂದ ಸಿಎ ನಿವೇಶನ ಪಡೆದು ಈಗ ಆ ಜಾಗದಲ್ಲಿ ಬಿರಿಯಾನಿ ಹೋಟೆಲ್ ನಡೆಸುತ್ತಿದ್ದಾರೆ. ಈಗ ನಾರಾಯಣಸ್ವಾಮಿ ಅವರೂ ಶಿಕ್ಷಣ ಸಂಸ್ಥೆ ಸ್ಥಾಪನೆಗೆಂದು ಮಂಜೂರಾದ ಜಮೀನನನ್ನು ವಾಪಸ್ ಮಾಡಿ ರಾಹುಲ್ ಖರ್ಗೆ ಅವರಂತೆ ಆದರ್ಶರಾಗುತ್ತಾರಾ? ಎಂದು ಭಂಡಾರಿ ಪ್ರಶ್ನಿಸಿದ್ದಾರೆ.

ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ದೇವನಹಳ್ಳಿ ಸಮೀಪದ ಕೈಗಾರಿಕಾ ಪ್ರದೇಶದಲ್ಲಿ 116 ಎಕರೆ ಭೂಮಿಯನ್ನು ಕೇವಲ 50 ಕೋಟಿ ರೂ.ಗೆ ಹಂಚಿಕೆ ಮಾಡಲಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 137 ಕೋಟಿ ರೂ. ನಷ್ಟವಾಗಿದೆ. ಈಗ ಆ ಜಮೀನನ್ನು ಆರ್ ಎಸ್ ಎಸ್ ನವರು ವಾಪಸ್ ಮಾಡುವ ಮೂಲಕ ಆದರ್ಶ ತೋರಿಸಲಿ ಎಂದು ಶಾಸಕ ಮಂಜುನಾಥ್ ಭಂಡಾರಿ ಸಲಹೆ ಮುಂದಿಟ್ಟಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬಳ್ಳಾರಿಯ ಕುವೆಂಪು ನಗರದ ಬಡಾವಣೆಯಲ್ಲಿ ನಾಗರಿಕ ಸೌಲಭ್ಯಕ್ಕೆ (ಸಿಎ) ಮೀಸಲಿಟ್ಟಿರುವ ಕೋಟ್ಯಾಂತರ ರೂ. ಬೆಲೆಬಾಳುವ ನಿವೇಶನವನ್ನು ರಾಷ್ಟ್ರೋತ್ಥಾನ ಪರಿಷತ್ ಗೆ ಶೇ.25ರ ದರದಲ್ಲಿ 30 ವರ್ಷಗಳಿಗೆ ಗುತ್ತಿಗೆ ನೀಡಲಾಗಿತ್ತು. ಇದರಿಂದ ಸರ್ಕಾರಕ್ಕೆ 7.50 ಕೋಟಿ ರೂ. ನಷ್ಟವಾಗಿದೆ. ಈಗ ರಾಷ್ಟ್ರೋತ್ಥಾನ ಪರಿಷತ್ ನವರು ಸಹ ಭೂಮಿಯನ್ನು ಹಿಂದಿರುಗಿಸುವರೇ? ಎಂದು ಪ್ರಶ್ನಿಸಿರುವ ಮಂಜುನಾಥ್ ಭಂಡಾರಿ, ಬಿಜೆಪಿ ಮತ್ತು ಸಂಘ ಪರಿವಾರದವರು ರಾಜ್ಯದ ವಿವಿಧೆಡೆಯಲ್ಲಿನ ಗೋಮಾಳ ಜಾಗವನ್ನು ಮಾರುಕಟ್ಟೆ ದರಕ್ಕಿಂತ ಚಿಲ್ಲರೆ ದರಕ್ಕೆ ಮಂಜೂರು ಮಾಡಿಸಿಕೊಂಡಿದ್ದಾರೆ. ಈಗ ಆ ಎಲ್ಲಾ ಜಾಗವನ್ನು ಸರ್ಕಾರಕ್ಕೆ ಹಿಂದಿರುಗಿಸುವ ಮೂಲಕ ಬಿಜೆಪಿ ನಾಯಕರು ಮತ್ತು ಆರ್ ಎಸ್ ಎಸ್ ನವರು ತಮ್ಮ ಆದರ್ಶತೆಯನ್ನು ತೋರಿಸಯತ್ತಾರಾ? ಎಂದಿದ್ದಾರೆ.

ನಿರುದ್ಯೋಗಿಗಳಿಗೆ ತರಬೇತಿ ಮತ್ತು ಸಂಶೋಧನಾ ಕೇಂದ್ರಕ್ಕಾಗಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ನೀವೇಶನ ಪಡೆಯಲಾಗಿತ್ತು. ಸಿದ್ಧಾರ್ಥ ವಿಹಾರ ಟ್ರಸ್ಟ್ ಜಮೀನನ್ನು ಕಾನೂನು ಬದ್ಧವಾಗಿ ಪೂರ್ತಿ ಹಣ ನೀಡಿ ಪಡೆಯಲಾಗಿದ್ದರೂ ಸುಳ್ಳು ಅಪಪ್ರಚಾರಕ್ಕೆ ಸಿಲುಕಬಾರದು ಎಂಬ ಕಾರಣಕ್ಕೆ ವಾಪಸ್ ನೀಡಿದ್ದಾರೆ. ವಾಪಸ್ ಕೊಡುವ ಮೂಲಕ ರಾಹುಲ್ ಖರ್ಗೆ ಅವರು ಬೇರೆಯವರಿಗೆ ಆದರ್ಶವಾಗಿದ್ದಾರೆ ಎಂದು ಮಂಜುನಾಥ ಭಂಡಾರಿ ಹೇಳಿದ್ದಾರೆ.

You may have missed