ಹಣ ನೀಡಲು ಮುಂದೆ ಬಂದ ಬಿಜೆಪಿ ನಾಯಕರು ಯಾರು? ಹಿಟ್‌ ಆಂಡ್‌ ರನ್‌ ಬೇಡ ಎಂದ ವಿಪಕ್ಷ ನಾಯಕ 

ಬೆಂಗಳೂರು: ಕಾಂಗ್ರೆಸ್‌ ಶಾಸಕರಿಗೆ ಹಣ ನೀಡುತ್ತೇವೆಂದು ಮುಂದೆ ಬಂದ ಬಿಜೆಪಿ ನಾಯಕರು ಯಾರೆಂದು ಸರಿಯಾಗಿ ತಿಳಿಸಲಿ. ಇಲ್ಲವಾದರೆ ಇದು ಹಿಟ್‌ ಆಂಡ್‌ ರನ್‌ ಆಗುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮುಳುಗಿರುವುದರಿಂದ ಸರ್ಕಾರ ಉಳಿಸಿಕೊಳ್ಳಲು ಶಾಸಕರಿಗೆ ಬೇರೆ ದಾರಿ ಇಲ್ಲ. ಇದಕ್ಕಾಗಿ ಬಿಜೆಪಿ ವಿರುದ್ಧ ಆಪಾದನೆ ಮಾಡಲಾಗಿದೆ. ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಕುತಂತ್ರವಿದು. ಸರ್ಕಾರ ಬೀಳಿಸಲು ಬಿಜೆಪಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಅವರ ಪಕ್ಷದವರೇ ಸರ್ಕಾರ ಬೀಳಿಸಲು ಮುಂದಾಗಿದ್ದಾರೆ ಎಂದರು.

ಕಾಂಗ್ರೆಸ್‌ ಶಾಸಕರ ಬಳಿ ಬಂದು ಮಾತಾಡಿದ ಬಿಜೆಪಿ ನಾಯಕರು ಯಾರು ಎಂದು ಕಾಂಗ್ರೆಸ್‌ ನಾಯಕರು ಸ್ಪಷ್ಟವಾಗಿ ತಿಳಿಸಲಿ. ಗ್ಯಾರಂಟಿಗಳನ್ನು ತೆಗೆದುಹಾಕಬೇಕೆಂದು ಶಾಸಕರೇ ಒತ್ತಾಯಿಸುತ್ತಿದ್ದಾರೆ. ಸರ್ಕಾರದಲ್ಲಿ ಹಣವಿಲ್ಲದೆ, ಮದ್ಯದ ತೆರಿಗೆಯನ್ನು ಮೂರನೇ ಬಾರಿಗೆ ಏರಿಕೆ ಮಾಡಲು ಪ್ರಯತ್ನ ಶುರುವಾಗಿದೆ. ನೀರಿನ ದರ ಹಾಗೂ ಬಸ್‌ ಟಿಕೆಟ್‌ ದರ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಪೆಟ್ರೋಲ್‌, ಮಾರ್ಗಸೂಚಿ ದರ ಹೆಚ್ಚಾಗಿದೆ. ಉಸಿರಾಡುವ ಗಾಳಿಗೂ ತೆರಿಗೆ ಹಾಕಿದರೆ ಇನ್ನು ಯಾವುದೂ ಉಳಿಯುವುದಿಲ್ಲ ಎಂದು ವ್ಯಂಗ್ಯವಾಡಿದರು.

ಗ್ಯಾರಂಟಿಗೆ ಹಣ ಮೀಸಲಿಡದೆ ಸರ್ಕಾರ ದಿವಾಳಿಯಾಗಿದೆ. ಇಂತಹ ಸ್ಥಿತಿಯಲ್ಲೂ ಕಾಂಗ್ರೆಸ್‌ ನಾಯಕರು ಏಣಿ ಹತ್ತಿಸಿದ ಮತದಾರರ ಬಗ್ಗೆ ಬಹಳ ಕೀಳಾಗಿ ಮಾತಾಡುತ್ತಿದ್ದಾರೆ. ಮುಂದೆ ಅಧಿಕಾರಕ್ಕೆ ಬರಲ್ಲ ಎಂಬುದು ಖಚಿತವಾಗಿರುವುದರಿಂದ ಆದಷ್ಟು ಲೂಟಿ ಮಾಡಲು ನೋಡುತ್ತಿದ್ದಾರೆ. ಈ ಅವಧಿಯಲ್ಲೇ ಡಾ.ಜಿ.ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲು ತಂತ್ರ ಮಾಡುತ್ತಿದ್ದಾರೆ. ಶಾಸಕರಿಗೆ ಹಣ ಕೊಡಲು ಬಂದವರು ಯಾರೆಂದು ಸರಿಯಾಗಿ ತಿಳಿಸಲಿ. ಇಲ್ಲವಾದರೆ ಇದು ಹಿಟ್‌ ಆಂಡ್‌ ರನ್‌ ಆಗುತ್ತದೆ ಎಂದರು.

You may have missed