ಭದ್ರಾ ಮೇಲ್ದಂಡೆ ಯೋಜನೆಗೆ ಮುಗಿಸುವ ಬಗ್ಗೆ ಖಾತರಿ ಇಲ್ಲ: ಕೇಂದ್ರ ಬಜೆಟ್ ಬಗ್ಗೆ  ಹೆಚ್ಡಿಕೆ ಟೀಕೆ

0

ದಾವಣಗೆರೆ: ಚುನಾವಣೆ ಹೊಸ್ತಿಲಲ್ಲಿ ಇರುವ ಕರ್ನಾಟಕಕ್ಕೆ ಚುನಾವಣೆ ನೆಪದಲ್ಲಾದರೂ ಏನಾದರೂ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ತುಟಿಗೆ ತುಪ್ಪ ಸವರುವ ಬದಲು ಹಣೆಗೆ ತುಪ್ಪ ಸವರುವ ಕೆಲಸವನ್ನು ಕೇಂದ್ರ ಬಜೆಟ್ ನಲ್ಲಿ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಹರಿಹರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ವೇಳೆ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು; ನಿಸ್ಸಂಶಯವಾಗಿ ಕೇಂದ್ರ ಬಜೆಟ್ ಮಂಡನೆ ಮೂಗಿಗೆ ತುಪ್ಪ ಸವರುವಂತಾಗಿದೆ ಚುನಾವಣೆ ಹಿನ್ನೆಲೆಯಲ್ಲಿ ನೀಡಿರುವ ಬಜೆಟ್ ಇದು ಎಂದರು. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಘೋಷಣೆ ಮಾಡಿದ್ದಾರೆ. ಅದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿ ಆದಷ್ಟು ಶೀಘ್ರ ಕಾರ್ಯಗತ ಮಾಡಬೇಕು. ಆದರೆ, ಯಾವಾಗ ಮುಗಿಸುತ್ತಿರಿ ಎನ್ನುವ ಬಗ್ಗೆ ಡಬಲ್ ಎಂಜಿನ್ ಸರಕಾರಕ್ಕೆ ಖಾತರಿ ಇಲ್ಲ ಎಂದು ಅವರು ಕುಟುಕಿದರು.

ಅವರು ಈಗ ಯಾವುದೇ ಅಭಿವೃದ್ಧಿ ಘೋಷಣೆ ಮಾಡಿದರೂ ರಾಜ್ಯದಲ್ಲಿ ಚುನಾವಣೆ ಬಳಿಕವೇ ಜಾರಿಗೆ ಆಗುವುದು. ಈ ಬಜೆಟ್ ಪ್ರಸ್ತಾವನೆಗಳನ್ನು ಜಾರಿ ಮಾಡುವ ವಿಷಯದಲ್ಲಿ ಮುಂದೆ ರಾಜ್ಯದಲ್ಲಿ ರಚನೆ ಆಗುವ ಸರಕಾರ ಪ್ಪಾತ್ರವೂ ಮುಖ್ಯವಾಗಿರುತ್ತದೆ. ನರೇಂದ್ರ ಮೋದಿ ಅವರ ಸರಕಾರ ಬಂದು ಎಂಟು ವರ್ಷ ಆಗಿದೆ. ಈ ಎಂಟು ವರ್ಷದಲ್ಲಿ ಘೋಷಣೆಯಾಗದ ಕಾರ್ಯಕ್ರಮಗಳನ್ನು ಇಂದು ಘೋಷಣೆ ಮಾಡಿದ್ದಾರೆ ಎಂದು ಅವರು ಟೀಕಿಸಿದರು.

ಬಜೆಟ್ ಘೋಷಣೆಗಳು ಕಾಗದದ ಪತ್ರಗಳ ಘೋಷಣೆಗಳಗಿಯೇ ಉಳಿದಿವೆ. ಕಳೆದ 25 ವರ್ಷಗಳಿಂದ ರೈಲ್ವೇ ಯೋಜನೆಗಳು ಇನ್ನೂ ನೆನೆಗುದಿಗೆ ಬಿದ್ದಿವೆ. ಎಷ್ಟು ಸಲ ಕೇಂದ್ರದ ಬಳಿ ಅರ್ಜಿ ಹಿಡಿದುಕೊಂಡು ಹೋಗುವುದು? ಡಬಲ್ ಎಂಜಿನ್ ಸರಕಾರ ಬಂದರೆ ಎಲ್ಲಾ ಮಾಡುತ್ತೇವೆ ಎಂದರು. ಮೂರು ವರ್ಷ ಆಯಿತು. ಇವರು ಏನೂ ಮಾಡಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಬಿಜೆಪಿ ನಾಯಕರು ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಹೋಗಿ ಸಾವಿರಾರು ಕೋಟಿ ಘೋಷಣೆ ಮಾಡುತ್ತಾರೆ. ಚುನಾವಣೆ ಮುಗಿದ ಮೇಲೆ ಕೈತೊಳೆದುಕೊಂಡು ಅತ್ತ ತಲೆ ಹಾಕುವುದಿಲ್ಲ. ಬಿಜೆಪಿ ಕಾರ್ಯಕ್ರಮಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ತಿರಸ್ಕರಿಸಲು ಜನರು ಸಿದ್ಧರಾಗಿದ್ದಾರೆ ಎಂದು ಅವರು ಟೀಕಿಸಿದರು.

Leave a Reply

Your email address will not be published. Required fields are marked *

You may have missed