‘ಇದು ಚುನಾವಣಾ ಬಜೆಟ್’; ಕೇಂದ್ರ ಆಯವ್ಯಯ ಬಗ್ಗೆ ಡಿಕೆಶಿ ಟೀಕೆ
ಬೆಂಗಳೂರು: ಕೇಂದ್ರ ಸರ್ಕಾರದ ಈ ಬಾರಿಯ ಬಜೆಟನ್ನು ಚುನಾವಣಾ ಬಜೆಟ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣ್ಣಿಸಿದ್ದಾರೆ.
ಬಜೆಟ್ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ‘ಇದು ಚುನಾವಣಾ ಬಜೆಟ್ ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ. ಈ ಬಜೆಟ್‌ನಲ್ಲಿ ರೈತರಿಗೆ ಸಹಾಯವಾಗಿಲ್ಲ. ಬೆಂಬಲ ಬೆಲೆ ಪ್ರಸ್ತಾಪವಾಗಿಲ್ಲ. ಸಿರಿಧಾನ್ಯಗಳಲ್ಲಿ ರಾಗಿಯೂ ಒಂದು ಎಂದು ಹೇಳಿದ್ದಾರೆ. ಆದರೆ ನಮ್ಮಲ್ಲಿ ರಾಗಿ ಕೊಳ್ಳುವವರೆ ಇಲ್ಲ. ರಾಜಕೀಯ ಉದ್ದೇಶದಿಂದ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಹೇಳಿದರು.
ಕಾಶ್ಮೀರ ಪ್ರವಾಸದ ಬಗ್ಗೆ ಮಾತನಾಡಿದ ಡಿಕೆಶಿ, ‘ಭಾರತ ಜೋಡೋ ಯಾತ್ರೆ ದೇಶದಲ್ಲಿನ ಸೌಹಾರ್ದತೆ, ಯುವಕರು, ರೈತರ ಸಮಸ್ಯೆಗೆ ಧ್ವನಿಯಾಗಿದೆ. ಆಮೂಲಕ ದೇಶದ ಐಕ್ಯತೆಗಾಗಿ, ದೇಶ ಒಗ್ಗೂಡಿಸಲು ಪ್ರಯತ್ನಿಸಿದ್ದಾರೆ. ಮಹಾತ್ಮಾ ಗಾಂಧಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಯಾವ ರೀತಿ ತ್ಯಾಗ, ಹೋರಾಟ ಮಾಡಿದರೋ ಅದೇ ರೀತಿ ರಾಹುಲ್ ಗಾಂಧಿ ಅವರು ಮಾಡಿದ್ದಾರೆ. ಪೂರ್ವದಿಂದ ಪಶ್ಚಿಮಕ್ಕೆ ಈ ಯಾತ್ರೆ ಮಾಡಬೇಕು ಎಂಬ ಒತ್ತಡ ಕೂಡ ಅವರ ಮೇಲಿದೆ. ಮುಂದಿನ ದಿನಗಳಲ್ಲಿ ಅವರು ತೀರ್ಮಾನ ಮಾಡಲಿದ್ದು, ಅವರ ತೀರ್ಮಾನವನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಸಮಾರೋಪ ಸಮಾರಂಭ ಬಹಳ ಅತ್ಯುತ್ತಮವಾಗಿ ನಡೆದಿದೆ. ನಾನು ಕನ್ಯಾಕುಮಾರಿ ಕಾರ್ಯಕ್ರಮ ಹಾಗೂ ಕಾಶ್ಮೀರದ ಕಾರ್ಯಕ್ರಮ ಎರಡಕ್ಕೂ ಹೋಗಿದ್ದೆ. ನಮ್ಮ ರಾಜ್ಯದಲ್ಲೂ ಬಹಳ ಚೆನ್ನಾಗಿ ಯಾತ್ರೆ ಸಾಗಿದೆ, ನಮ್ಮ ಆತಿಥ್ಯ, ಉಪಚಾರವನ್ನು ದೇಶದ ಎಲ್ಲ ನಾಯಕರು ಸ್ಮರಿಸಿದರು. ನಮ್ಮ ಪಕ್ಷದ ಕಾರ್ಯಕರ್ತರು ಈ ಯಾತ್ರೆಯಲ್ಲಿ ಸಾಗಿದ್ದರು. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಯಾತ್ರೆ ಜೀವ ತುಂಬಿದೆ. ಜಮ್ಮು ಕಾಶ್ಮೀರದಲ್ಲೂ ಯಾತ್ರೆ ಸಮಯದಲ್ಲಿ ರೈತರು, ಯುವಕರು ರಾಹುಲ್ ಗಾಂಧಿ ಅವರಿಗೆ ಸ್ವಾಗತ ನೀಡಿದರು. ಕೊನೆ ದಿನ ವಿಪರೀತ ಹಿಮ, ಚಳಿ ಇತ್ತು. ಈ ರೀತಿಯ ಹಿಮಪಾತ ನೋಡಿದ್ದು ನನಗೆ ಹೊಸ ಅನುಭವ. ನಾವು ಇಂತಹ ಪ್ರಕೃತಿ ಸೌಂದರ್ಯ ಸವಿಯಲು ಯಾವುದೇ ವಿದೇಶಕ್ಕೆ ಹೋಗುವುದು ಬೇಡ. ಕಾಶ್ಮೀರಕ್ಕೆ ಪ್ರವಾಸ ಮಾಡಿದರೆ ಸಾಕು ಎಂದು ನಮ್ಮ ರಾಜ್ಯದವರಿಗೆ ಹೇಳುತ್ತೇನೆ’ ಎಂದು ಹೇಳಿದರು.