ವಿದ್ಯಾದಶಮಿ; ದೇವಿ ಸನ್ನಿಧಿಯಲ್ಲಿ ಮೊದಲ ಅಕ್ಷರಾಭ್ಯಾಸ
ವಿಜಯದಶಮಿ ದಿನದಂದು ನಾಡಿನ ಹಲವೆಡೆ ವಿಶೇಷ ಪೂಜೆ-ಪ್ರಾರ್ಥನೆ ಉತ್ಸವಗಳು ನೆರವೇರಿದರೆ ಉಡುಪಿಯ ಅಂಬಲಪಾಡಿ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದಲ್ಲಿ ಮೊದಲ ಅಕ್ಷರಾಭ್ಯಾಸ ಮಾಡುವುದು ವಿಶೇಷ.. ವಿದ್ಯಾದಶಮಿಯ ದಿನವಾದ ನಿನ್ನೆ ದೇವಿ ಸನ್ನಿಧಿಯಲ್ಲಿ ಮೊದಲ ಅಕ್ಷರಾಭ್ಯಾಸ ಮಾಡಿದರೆ, ಮಕ್ಕಳು ಬುದ್ದಿವಂತರಾಗುತ್ತಾರೆ ಹಾಗೂ ಬದುಕಿನಲ್ಲಿ ಉನ್ನತ ಸ್ಥಾನಕ್ಕೆ ತಲುಪುತ್ತಾರೆಂಬ ನಂಬಿಕೆ ಇದೆ. ಹೀಗಾಗಿ ನೂರಾರು ಮಕ್ಕಳು ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನಗಳಲ್ಲಿ ವಿದ್ಯಾರಂಭ ಮಾಡಿದರು.
ಇದೇ ವೇಳೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲೂ ವಿದ್ಯಾರಂಭ ಕೈಂಕರ್ಯ ಗಮನಸೆಳೆಯಿತು. ಮೂಕಾಂಬಿಕಾ ಕ್ಷೇತ್ರದಲ್ಲಿ ವಿದ್ಯಾರಂಭ ಮಾಡಿಸಲು ಸಾವಿರಾರು ಮಂದಿ ಭಕ್ತರು ಬಂದಿದ್ದರು. ದೇವಸ್ಥಾನದಲ್ಲಿ ದೇವಿಯ ಉತ್ಸವದ ನಂತರ ಅರ್ಚಕರು ಮಕ್ಕಳ ನಾಲಿಗೆ ಮೇಲೆ ಚಿನ್ನದುಂಗರದಲ್ಲಿ ಶ್ಲೋಕ ಬರೆದರು. ಪೋಷಕರು ಮಕ್ಕಳ ಕೈಯನ್ನಿಡಿದು ಅಕ್ಕಿಯಲ್ಲಿ ಅಕ್ಷರಾಭ್ಯಾಸ ಮಾಡಿಸಿದರು. ಕೊಲ್ಲೂರು ಮೂಕಾಂಬಿಕೆ ಮತ್ತು ಉಡುಪಿ ಅಂಬಲಪಾಡಿ ಮಹಾಕಾಳಿಯ ಸಮ್ಮುಖ ಅಕ್ಷರಾಭ್ಯಾಸ ನಡೆಸಿದರೆ ತಮ್ಮ ಮಕ್ಕಳು ಒಳ್ಳೆಯ ವಿದ್ಯಾವಂತರಾಗುತ್ತಾರೆ ಹಾಗೂ ಭವಿಷ್ಯ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಹಲವರದು.
ವಿದ್ಯಾರಂಭದ ನಂತರ ಮಕ್ಕಳನ್ನು ಶಾಲೆಗಳಿಗೆ ಸೇರಿಸಲಾಗುತ್ತದೆ. ನವರಾತ್ರಿ ಸಂದರ್ಭ ನಡೆದ ವಿದ್ಯಾರಂಭಕ್ಕೆ ಭಕ್ತರು ಹೆಚ್ಚಿನ ಮಹತ್ವ ನೀಡುತ್ತಾರೆ.