ತಮಿಳುನಾಡು ಕಡಲ ಕಿನಾರೆಯಲ್ಲಿ 100ಕ್ಕೂ ಅಧಿಕ ತಿಮಿಂಗಿಲಗಳ ಮೃತದೇಹ ಪತ್ತೆ
ತಮಿಳುನಾಡಿನ ಜನರು ಇಂದು ಬೆಳಗ್ಗೆ ನಿಜಕ್ಕೂ ಅಚ್ಚರಿಗೊಂಡರು. ಸಮುದ್ರತೀರಕ್ಕೆ ಹೋಗಿದ್ದ ಜನರು ಅಪರೂಪದ ದೃಷ್ಯಕಂಡು ನಿಬ್ಬೆರಗಾದರು. ಬೆಳ್ಳಂಬೆಳಗ್ಗೆ ಮಾನಪ್ಪಾಡು ಹಾಗೂ ಸುತ್ತಮುತ್ತಲ ಗ್ರಾಮಗಳ ಸಮುದ್ರ ತೀರದಲ್ಲಿ ತಿಮಿಂಗಿಲಗಳು ಕಾಣಿಸಿಕೊಂಡು ಅಚ್ಚರಿ ಸೃಷ್ಟಿಸಿತು. ತಿಮಿಂಗಿಲಗಳೆಂದರೆ ಜನರಿಗೆ ಎಲ್ಲಿಲ್ದ ಭಯ. ಮನುಷ್ಯರನ್ನು ತಿಂದು, ತೇಗುವ ಈ ದೈತ್ಯ ತಿಮಿಂಗಿಲಗಳೇ ಸಮುದ್ರ ದಡದಲ್ಲಿ ಉರುಳಾಡುತ್ತಿದ್ದ ದೃಷ್ಯವನ್ನು ಕಂಡು ಜನ ಕುತೂಹಲಚಿತ್ತರಾದರು.
ತಿಮಿಂಗಿಲಗಳು ಮನುಷ್ಯರಿಗೆ ಕಾಣಸಿಗುವುದು ವಿರಳ. ಸಮುದ್ರ ಮಧ್ಯದಲ್ಲಿ ಅಂದರೆ ತೀರದಿಂದ ಹಲವು ನಾಟಿಕಲ್ ಮೈಲು ದೂರ ಕೇಂದ್ರೀಕೃತವಾಗಿರುವ ತಿಮಿಂಗಿಲಗಳು, ತಮಿಳುನಾಡು ಕರಾವಳಿಯಲ್ಲಿ ಪ್ರತ್ಯಕ್ಷವಾಗಿದ್ದೇ ತಡ ದೇಶವ್ಯಾಪಿ ಸುದ್ದಿ ಹರಡಿಯೇ ಬಿಟ್ಟಿತ್ತು. ಅಲ್ಲಿ ಕಂಡು ಬಂದದ್ದು ಒಂದೆರಡು ದೈತ್ಯ ಮತ್ಸ್ಯವಲ್ಲ.ಬದಲಾಗಿ ತೀರದುದ್ದಕ್ಕೂ ಅಲ್ಲಲ್ಲಿ ನೂರಾರು ತಿಮಿಂಗಿಲಗಳು ದಡ ಸೇರಿ ವಿಲವಿಲನೆ ಒದ್ದಾಡುತ್ತಿದ್ದವು.
ತಿಮಿಂಗಿಲಗಳು ಮನುಷ್ಯರನ್ನೇ ನುಂಗುವ ಮತ್ಸ್ಯ. ಆದರೆ, ಕಡಲ ಕಿನಾರೆ ಸೇರಿದ ಈ ತಿಮಿಂಗಿಲಗಳನ್ನು ನೋಡಿ ಜನ ಹೆದರಲಿಲ್ಲ.ಬದಲಾಗಿ ಹತ್ತಿರಕ್ಕೆ ತೆರಳಿ ಅವುಗಳನ್ನು ಮುಟ್ಟಿ ವಿಶೇಷ ಅನುಭವವನ್ನು ಕಂಡು ಪುಳಕಿತರಾದವರು ಅನೇಕರು.
ಸಾವಿರಾರು ಜನ ಸ್ಥಳಕ್ಕೆ ಧಾವಿಸಿ ಬಂದು ಈ ತಿಮಿಂಗಿಲಗಳ ಪ್ರತ್ಯಕ್ಷ ದರ್ಶನ ಮಾಡಿದರು. ತಮ್ಮ ತಮ್ಮ ಮೊಬೈಲ್ ಗಳಲ್ಲಿ ಈ ತಿಮಿಂಗಿಲಗಳ ದೃಶ್ಯಗಳನ್ನು ಸೆರೆ ಹಿಡಿದವರ ಸಂಖ್ಯೆಗೆ ಲೆಕ್ಕವೇ ಇಲ್ಲ.
ಕೆಲವರು ಎಣಿಕೆ ಮಾಡಿದಂತೆ ಅಲ್ಲಿದ್ದ ಈ ದೈತ್ಯ ಸಮುದ್ರ ಜೀವಿಗಳ ಸಂಖ್ಯೆ 120. ಇವುಗಳು ದಡದ ಈಚೆ ಬಂದು ಬಿದ್ದಿರುವ ತಿಮಿಂಗಿಲಗಳಷ್ಟೆ. ಆದರೆ, ಬೀಚ್ ನ ಉದ್ದಕ್ಕೂ ಅವೆಷ್ಟೋ ತಿಮಿಂಗಿಲಗಳು ಬಂದು ಅಪ್ಪಳಿಸುತ್ತವೋ ಎಂಬ ಆತಂಕ ಜನರನ್ನು ಕಾಡಿತ್ತು.
ಈ ತಿಮಿಂಗಿಲಗಳನ್ನು ಮರಳಿ ಸಮುದ್ರಕ್ಕೆ ಸೇರಿಸುವುದು ಹೇಗೆ ಎಂಬ ಚಿಂತೆಯೂ ಅಲ್ಲಿದ್ದವರನ್ನು ಕಾಡಿತ್ತು. ಕರಾವಳಿ ಕಾಲುಪಡೆಯಾಗಲಿ, ಮೀನುಗಾರರಾಗಲಿ, ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ, ಈ ತಿಮಿಂಗಿಲಗಳು ಎಲ್ಲರ ಕುತೂಹಲ ಹಾಗೂ ಅಚ್ಚರಿಯ ಕೇಂದ್ರ ಬಿಂದುವಾಗಿದ್ದವು.
ಆದರೆ ಕ್ಷಣಗಳು ಉರುಳುತ್ತಲೇ ಜನರಿಗೆ ಬೇಸರದ ಸಂಗತಿಗೂ ಅದು ಕಾರಣವಾಯಿತು. ಏಕೆಂದರೆ ಅಲ್ಲಿ ಕಂಡು ಬಂದ 120 ತಿಮಿಂಗಿಲಗಳು ಹೊತ್ತು ಕಳೆದಂತೆ ಶವವಾಗಿ ಮಾರ್ಪಾಡಾದವು..