ಒಳ ಮೀಸಲಾತಿ ಹೆಸರಲ್ಲಿ‌ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಬೆಂಬಲಿಗರ ತಯಾರಿ

ಬೆಂಗಳೂರು: ಒಳ ಮೀಸಲಾತಿ ಹೆಸರಲ್ಲಿ‌ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಬೆಂಬಲಿಗರಿಂದ ತಯಾರಿ ನಡೆದಿದೆ. ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಸಮಾರಂಭ ನಡೆಸಲಾಗುವುದು ಎಂದು ಮಾಜಿ ಸಚಿವ ಎಚ್ ಆಂಜನೇಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಗೆ ಸಿದ್ದರಾಮಯ್ಯ ಅವರ ಸರ್ಕಾರ ಮುಂದಾಗಿದೆ. ಶೋಷಿತರ ಪರವಾಗಿ ದಿಟ್ಟ ತೀರ್ಮಾನ ತೆಗೆದುಕೊಂಡಿದೆ. ಏಕೆ ಸದಸ್ಯ ಆಯೋಗವನ್ನು ಈಗ ರಚನೆ ಮಾಡಿದ್ದು. ಈ ಆಯೋಗವು ಮೂರು ತಿಂಗಳಲ್ಲಿ ವರದಿಯನ್ನು ನೀಡಬೇಕು. ನಾಲ್ಕನೇ ತಿಂಗಳಲ್ಲಿ ಇದು ಅನುಷ್ಠಾನಕ್ಕೆ ಬರಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಬಡವರ, ಶೋಷಿತರ, ತುಳಿತಕ್ಕೆ ಒಳಗಾದವರ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಹರಿಕಾರರು. ಒಳ ಮೀಸಲಾತಿ ವಿಚಾರ ನಿರ್ಧಾರವಾಗುವ ತನಕ, ಹೊಸದಾಗಿ ನೇಮಕಾತಿ ಆದೇಶ ಹೊರಡಿಸಬಾರದು ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಒಳ ಮೀಸಲಾತಿ ಪರವಾಗಿ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಉಪಚುನಾವಣೆಯ ನಂತರ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಿ ಅಭಿನಂದನೆ ತಿಳಿಸುತ್ತೇವೆ ಎಂದ ಆಂಜನೇಯ, ಮೂರು ತಿಂಗಳ ನಂತರ ಒಳ ಮೀಸಲಾತಿ ಜಾರಿಗೆ ಬರುತ್ತದೆ ಎಂದು ಆತಂಕವನ್ನು ಅನೇಕ ಹೋರಾಟಗಾರರು ವ್ಯಕ್ತಪಡಿಸುತ್ತಿದ್ದಾರೆ. ಒಂದಷ್ಟು ಜನ ವಾಟ್ಸಪ್ ನಲ್ಲಿ ಸರ್ಕಾರದ ವಿರುದ್ಧ ನಿಂದನೆಯ ಮಾತನ್ನು ಆಡುತ್ತಿದ್ದಾರೆ. ಯಾವುದೇ ಆತಂಕ ಬೇಡ ಮೂರು ತಿಂಗಳ ನಂತರ ಒಳ ಮೀಸಲಾತಿ ಜಾರಿಗೆ ಬಂದೇ ಬರುತ್ತದೆ ಎಂದರು.

30 ವರ್ಷಗಳ ಕಾಲ ಕಾದಿರುವ ನಾವು ಇನ್ನು ಕೇವಲ ಮೂರು ತಿಂಗಳ ಕಾಲ ಕಾಯಬೇಕು. ಸ್ವಲ್ಪ ತಾಳ್ಮೆಯನ್ನು ವಹಿಸಿದರೆ ಸಿಹಿ ಖಂಡಿತ ಎಂದ ಅವರು, ಹಳೆ ಮೈಸೂರು ಭಾಗದಲ್ಲಿ ಒಂದೇ ಜಾತಿಯವರು ಎರಡು ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿದ್ದಾರೆ. ಮಾದಿಗ ಸಮುದಾಯದಲ್ಲಿ ಆದಿ ಕರ್ನಾಟಕ ಎಂದು ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಹೊಲೆಯರಲ್ಲಿ ಚಲವಾದಿ ಸಮುದಾಯದವರು ಸಹ ಆದಿ ಕರ್ನಾಟಕ ಎಂದು ಪ್ರಮಾಣ ಪತ್ರ ಬರೆಯುತ್ತಿದ್ದಾರೆ. ಇದರಲ್ಲಿ ಜನಸಂಖ್ಯೆಯನ್ನು ನಿಖರವಾಗಿ ಬೇರ್ಪಡಿಸಲು ಆಗಿಲ್ಲ. ಈ ಕಾರಣಕ್ಕಾಗಿ ದತ್ತಾಂಶ ವಿಂಗಡಣೆಗೆ, ಆಯೋಗವನ್ನು ರಚನೆ ಮಾಡಲಾಗಿದೆ ಎಂದರು.

ಈ ಹಿಂದಿನ ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ರದ್ದು ಮಾಡಿ. ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಮಾಡಿದಂತಹ ವರದಿ ಅನ್ವಯ ಒಳ ಮೀಸಲಾತಿಗೆ ಶಿಫಾರಸ್ಸು ಮಾಡಿತ್ತು. ಮಾದಿಗರಿಗೆ ಶೇಕಡ 6, ಹೊಲೇರಿಗೆ ಶೇಕಡ 5.5, ಲಂಬಾಣಿ ಭೋವಿ ಸಮುದಾಯಕ್ಕೆ ಶೇ 4, ಇತರೆ ಅಲೆಮಾರಿ ಸಮುದಾಯಗಳಿಗೆ ಶೇ 1 ರಷ್ಟು ಮೀಸಲಾತಿಯನ್ನು ನಿಗದಿ ಮಾಡಲಾಗಿತ್ತು. ಶೇಕಡ 15ರಷ್ಟು ಇದ್ದ ಮೀಸಲಾತಿಯನ್ನು 17 ಕ್ಕೆ ಏರಿಸಿ ಈ ವರದಿಯನ್ನು ಮಾಡಲಾಗಿತ್ತು ಎಂದ ಆಂಜನೇಯ, ದೀಪಾವಳಿ ನಂತರ ಹೈಕೋರ್ಟಿನ ಉತ್ತಮ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗವನ್ನು ಸಿದ್ದರಾಮಯ್ಯ ಅವರ ಸರಕಾರ ರಚನೆ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.

You may have missed