BBMP ಹಾಗೂ ತಾ.ಪಂ., ಜಿ.ಪಂ ಚುನಾವಣೆ ವಿಳಂಬ; ಸರ್ಕಾರಕ್ಕೆ ಚಾಟಿ ಬೀಸಿದ ಚುನಾವಣ ಆಯುಕ್ತ ಜಿ.ಎಸ್‌. ಸಂಗ್ರೇಶಿ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸಹಿತ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಹಕರಿಸದ ರಾಜ್ಯ ಸರ್ಕಾರದ ವಿರುದ್ದ ರಾಜ್ಯ ಚುನಾವಣ ಆಯೋಗದ ಆಯುಕ್ತ ಜಿ.ಎಸ್‌. ಸಂಗ್ರೇಶಿ ಛಾಟಿ ಬೀಸಿದ್ದಾರೆ. 2025ರ ಮಾರ್ಚ್‌ ಅಂತ್ಯದ ವೇಳೆಗೆ ಚುನಾವಣೆ ನಡೆಯದಿದ್ದರೆ 15ನೇ ಹಣಕಾಸು ಆಯೋಗದಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ 2,100 ಕೋಟಿ ರೂಪಾಯಿ ಅನುದಾನ ಕೈತಪ್ಪಲಿದೆ ಎಂದು ಅವರು ಎಚ್ಚರಿಕೆಯ ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಚುನಾವಣ ಆಯೋಗದ ಆಯುಕ್ತ ಜಿ.ಎಸ್‌. ಸಂಗ್ರೇಶಿ, ಈ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸುವಂತೆ ಮಾಡಿರುವ ಸಲಹೆ ಗಮನಸೆಳೆದಿದೆ. 15ನೇ ಹಣಕಾಸು ಆಯೋಗ ದಲ್ಲಿ 2020-21ನೇ ಸಾಲಿನಿಂದೀಚೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 2,100 ಕೋಟಿ ರೂಪಾಯಿ ಅನುದಾನ ಬರಬೇಕಿತ್ತು. ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ವ್ಯವಸ್ಥೆ ಇದ್ದರೆ ಮಾತ್ರ ಅನುದಾನ ಬಿಡುಗಡೆ ಎಂಬ ಹಣಕಾಸು ಆಯೋಗದ ಷರತ್ತು ಇದೆ. ಆದರೆ ಬಿಬಿಎಂಪಿ ಹಾಗೂ ಜಿ.ಪಂ.-ತಾ.ಪಂ.ಗಳಿಗೆ 4 ವರ್ಷಗಳಿಂದ ಚುನಾವಣೆ ನಡೆದಿಲ್ಲ ಎಂಬ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

2025ರ ಮಾರ್ಚ್‌ ಅಂತ್ಯದವರೆಗೂ ಚುನಾವಣೆಗಳು ನಡೆಯದಿದ್ದರೆ 2,100 ಕೋಟಿ ರೂ. ಅನುದಾನ ನಮಗೆ ಸಿಗುವುದಿಲ್ಲ ಎಂದು ಪ್ರತಿಪಾದಿಸಿದ ಆಯುಕ್ತರು, ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಶೀಘ್ರವೇ ಪತ್ರ ಬರೆಯುವುದಾಗಿ ತಿಳಿಸಿದರು.

ಸುಪ್ರೀಂ ಕೋರ್ಟ್‌ 2006ರಲ್ಲೇ ಸ್ಥಳೀಯ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದೆ. ಅವಧಿ ಮುಗಿಯುವ ಸ್ಥಳೀಯ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ಚುನಾವಣೆ ನಡೆಸುವುದು ರಾಜ್ಯ ಚುನಾವಣ ಆಯೋಗದ ಸಂವಿಧಾನಬದ್ಧ ಹೊಣೆಗಾರಿಕೆಯಾಗಿದೆ ಎಂದ ಸಂಗ್ರೇಶಿ. ಕ್ಷೇತ್ರ ಪುನರ್‌ ವಿಂಗಡಣೆ, ಮೀಸಲಾತಿ ನಿಗದಿಯಂತಹಾ ಕಾರಣಗಳಿಗಾಗಿ ವಿಳಂಬವಾಗಿವೆ. ಇನ್ನಷ್ಟು ವಿಳಂಬವಾಗುವುದು ಸರಿಯಲ್ಲ ಎಂದ ಜಿ.ಎಸ್.ಸಂಗ್ರೇಶಿ ಅವರು, ಕಾಲಮಿತಿಯೊಳಗೆ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸ್ವತಃ ಚುನಾವಣ ಆಯೋಗ ನ್ಯಾಯಾಲಯದ ಮೊರೆ ಹೋಗಿದೆ ಎಂದರು.

You may have missed