ಸ್ತ್ರೀ ಶಕ್ತಿ ಸಂಘಗಳ ಉಚಿತ ನೋಂದಣಿ; ಪ್ರಮಾಣಪತ್ರ ವಿತರಿಸಿದ ಸಚಿವ ಸೋಮಶೇಖರ್
ಬೆಂಗಳೂರು: ಸಹಕಾರ ಸಚಿವರು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಟಿ.ಸೋಮಶೇಖರ್ ಅವರು, ಮಹಿಳಾ ದಿನಾಚರಣೆ ಅಂಗವಾಗಿ ಹೆಮ್ಮಿಗೆಪುರ ವಾರ್ಡ್ ನ 150ಕ್ಕೂ ಅಧಿಕ ಸ್ತ್ರೀ ಶಕ್ತಿ ಸಂಘಗಳ ಉಚಿತ ನೋಂದಣಿ ಪ್ರಮಾಣಪತ್ರ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಸಚಿವರು, ಸ್ತ್ರೀ ಶಕ್ತಿ ಸಂಘಗಳ ನೋಂದಣಿಗೆ ಹಣ ಕೇಳುತ್ತಿದ್ದಾರೆ. ನೋಂದಣಿ ಮಾಡಿಕೊಳ್ಳಲು ಪರದಾಡುತ್ತಿರುವುದನ್ನು ಮನಗಂಡು ಶಾಸಕರ ಕಚೇರಿಯಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು ಎಂದರು.
ಹೆಮ್ಮಿಗೆಪುರ ವಾರ್ಡ್‌ನ ಸುಮಾರು 3 ಸಾವಿರಕ್ಕೂ ಅಧಿಕ ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈಡೀ ಕ್ಷೇತ್ರದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಸ್ತ್ರೀ ಶಕ್ತಿ ಸಂಘಗಳನ್ನು ಉಚಿತವಾಗಿ ನೋಂದಣಿ ಮಾಡಿಕೊಡಲಾಗಿದೆ. ಮಹಿಳೆಯರು ಆರ್ಥಿಕವಾಗಿ ಪ್ರಬಲರಾಗಬೇಕು. ಸ್ವಾವಲಂಬಿ ಬದುಕು ನಡೆಸುವಂತಾಗಲು ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ಮಹಿಳೆಯರನ್ನು ತೊಡಗಿಸುವುದರ ಮೂಲಕ ಬಡ ಮಹಿಳೆಯರ ಆದಾಯವನ್ನು ಹೆಚ್ಚಿಸಿ, ಆರ್ಥಿಕ ಸ್ಥಿರತೆಯನ್ನು ಮೂಡಿಸುವ ಉದ್ದೇಶದಿಂದ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಬಡತನ ನಿರ್ಮೂಲನೆಗೊಳಿಸಿ, ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು. ಗ್ರಾಮೀಣ ಜನರಲ್ಲಿ ನಾಯಕತ್ವ ಗುಣವನ್ನು ಬೆಳೆಸುವುದು. ಪರಸ್ಪರ ಸಹಕಾರ ಹಸ್ತವನ್ನು ಚಾಚುವಲ್ಲಿ ಸ್ವಸಹಾಯ ಸಂಘಗಳು ಸಹಕಾರಿಯಾಗಲಿದೆ ಎಂದು ಹೇಳಿದರು.