ಶ್ರೀ ಚಿತ್ರಾಪುರ ಮಠದ ಸದ್ಯೋಜಾತ ಶಂಕರಾಶ್ರಮ ಸ್ವಾಮಿಜಿಯ ಸೀಮೋಲ್ಲಂಘನ ಮತ್ತು ದಿಗ್ವಿಜಯ ಮಹೋತ್ಸವ
ಮಂಗಳೂರು: ಚಿತ್ರಾಪುರ ಸಾರಸ್ವತ ಸಮಾಜದ ಗುರುಗಳಾಗಿರುವ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮಿಜಿ, ಮಠಾಧಿಪತಿ, ಶ್ರೀ ಚಿತ್ರಾಪುರ ಮಠ, ಶಿರಾಲಿ, ಉ.ಕ.ಜಿಲ್ಲೆ ಇವರ ಸೀಮೋಲ್ಲಂಘನ ಹಾಗೂ ದಿಗ್ವಿಜಯ18.09.2024ರಂದು ನಡೆಯಲಿದೆ.
ಈ ಬಾರಿ ಸ್ವಾಮೀಜಿಯವರ ಚಾತುರ್ಮಾಸ ವೃತವು ಎರಡು ತಿಂಗಳ ಕಾಲ ಮಂಗಳೂರಿನ ಶರವು ದೇವಸ್ಥಾನ ರಸ್ತೆಯಲ್ಲಿರುವ ಶ್ರೀ ವಾಮನಾಶ್ರಮ ಮಠ (ಚಿತ್ರಾಪುರ ಮಠ) ದಲ್ಲಿ ಜರಗುತ್ತಿದ್ದು, ಈ ಚಾತುರ್ಮಾಸ ವೃತವು ಸೆಪ್ಟೆಂಬರ್ ತಿಂಗಳ 18ರಂದು ಮುಕ್ತಾಯಗೊಳ್ಳಲಿದೆ.
ಆ ಪ್ರಯುಕ್ತ ಸೆಪ್ಟೆಂಬರ್ 18ರಂದು (ಬುಧವಾರ) ಸಂಜೆ 4.00 ಗಂಟೆಗೆ ಸೀಮೋಲ್ಲಂಘನ ಕಾರ್ಯಕ್ರಮವು ನಗರದ ಸುಲ್ತಾನ್ ಬತ್ತೇರಿ ಬಳಿಯಿರುವ ನದಿ ತಟದಲ್ಲಿ ನಡೆಯಲಿದೆ. ರಾತ್ರಿ ಗಂಟೆ 7.00ರಿಂದ ಮಂಗಳೂರು ನಗರದ ಗಣಪತಿ ಪ್ರೌಢ ಶಾಲೆಯ ಆವರಣದಿಂದ ದಿಗ್ವಿಜಯೋತ್ಸವವು (ಶೋಭಾಯಾತ್ರೆ) ಪ್ರಾರಂಭವಾಗಿ ಜಿ.ಎಚ್.ಎಸ್. ಅಡ್ಡ ರಸ್ತೆ, ಭವಂತಿಸ್ಟ್ರೀಟ್, ವೆಂಕಟರಮಣ ದೇವಸ್ಥಾನ ರಸ್ತೆ, ಮಹಮ್ಮಾಯ ದೇವಸ್ಥಾನ ರಸ್ತೆ, ಕೆನರಾ ಹೈಸ್ಕೂಲ್ ಹಿಂಬದಿಯ ರಸ್ತೆ, ನವಭಾರತ ವೃತ್ತ, ಡೊಂಗರಕೇರಿ, ನ್ಯೂಚಿತ್ರಾ ಜಂಕ್ಷನ್, ಬಿ.ಇ.ಎಂ ಹೈಸ್ಕೂಲ್ ರಸ್ತೆ, ರಥಬೀದಿಯಾಗಿ ಗಣಪತಿ ದೇವಸ್ಥಾನ ರಸ್ತೆಯಲ್ಲಿರುವ ಸಮಾಧಿಮಠಕ್ಕೆ ತಲುಪುವುದು. ಈ ಶೋಭಾಯಾತ್ರೆಯಲ್ಲಿ ಚಂಡೆ, ಕೀಲುಕುದುರೆ, ಸೆಕ್ರೋಪೋನ್, ಬ್ಯಾಂಡ್ ಸೆಟ್, ಯಕ್ಷಗಾನ ರೂಪಕ ಟ್ಯಾಬ್ಲೊ, ಹುಲಿವೇಷ ಟ್ಯಾಬ್ಲೊ, ಭಜನಾ ಟ್ಯಾಬ್ಲೂ ಮತ್ತು ಶ್ರೀ ಸ್ವಾಮೀಜಿಯವರು ಆಸೀನರಾಗಿರುವ ಟ್ಯಾಬ್ಲೋ ಒಳಗೊಂಡಿರುತ್ತದೆ ಎಂದು ಸಂಘಟಕರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.