ಸ್ಯಾಂಕಿ ಫ್ಲೈಓವರ್ ವಿರುದ್ದ ಆಕ್ರೋಶ ಸ್ಫೋಟ.. ಸಾರ್ವಜನಿಕರ ‘ಪಂಚ್’ ಪ್ರಶ್ನೆಗಳಿಗೆ ಉತ್ತರಿಸ್ತಾರಾ ಸಿಎಂ?

0

ಬೆಂಗಳೂರು: ಸ್ಯಾಂಕಿ ಫ್ಲೈ ಓವರ್ ವಿರುದ್ದ ಹೋರಾಟ ನಡೆಸುವವರ ವಿರುದ್ದ ಸುಳ್ಳು ಕೇಸ್ ಹಾಕಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತಂತೆ ಮಲ್ಲೇಶ್ವರದಲ್ಲಿನ ಸ್ಟೆಲ್ಲಾ ಮರೀಸ್ ಸ್ಕೂಲ್ ಸಮೀಪ ಭಾನುವಾರ ಸ್ಥಳೀಯ ನಾಗರಿಕರ ಉಪಸ್ಥಿತಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರು ಸಿಎಂ ಬೊಮ್ಮಾಯಿ ಹಾಗೂ ಸಚಿವ ಅಶ್ವಥ ನಾರಾಯಣ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.‌

ಬೊಮ್ಮಾಯಿ ಅವರು ಪದೇ ಪದೆ ಹೇಳುತ್ತಿರುವಂತೆ ಕರ್ನಾಟಕ ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿ ಜಾರಿ ಮಾಡಲಾಗುತ್ತಿದೆ. ಉತ್ತರ ಪ್ರದೇಶದ ಮಾದರಿಯಲ್ಲೇ ಯಾರೂ ಸರ್ಕಾರದ ವಿರುದ್ಧ ಮಾತನಾಡಬಾರದು, ಪ್ರಶ್ನೆ ಕೇಳಬಾರದು, ಪ್ರತಿಭಟನೆ ಮಾಡಬಾರದು ಎಂಬ ದಬ್ಬಾಳಿಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷವಾಗಲಿ, ಸಾರ್ವಜನಿಕರಾಗಲಿ, ಸರ್ಕಾರದ ವಿರುದ್ದ ಮಾತನಾಡಿದರೆ ಪೊಲೀಸರ ಮೂಲಕ ದೌರ್ಜನ್ಯ, ಪ್ರಕರಣ ದಾಖಲಿಸಲಾಗುವುದು ಎಂಬ ಸಂದೇಶವನ್ನು ಈ ಸರ್ಕಾರ ಅಶ್ವತ್ಥ್ ನಾರಾಯಣ ಅವರ ಮೂಲಕ ಕಳುಹಿಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಮಲ್ಲೇಶ್ವರಂನ 60-70 ಜನರ ವಿರುದ್ದ ಎಫ್ಐಆರ್?

ಮಲ್ಲೇಶ್ವರಂನ 60-70 ಜನರ ವಿರುದ್ದ ಈಗ ಪ್ರಕರಣ ದಾಖಲಾಗಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅವರು ಮಾಡಿರುವ ತಪ್ಪು ಏನೆಂದರೆ, ಸ್ಯಾಂಕಿ ಮೇಲ್ಸೆತುವೆ ಯೋಜನೆ ವಿರೋಧಿಸಿ ಪರಿಸರ ಉಳಿಸಲು ಹೋರಾಟ ಮಾಡಿರುವುದು. ಈ ಸಾರ್ವಜನಿಕರು 22 ಸಾವಿರ ಜನ ಸಹಿ ಹಾಕಿರುವ ಅರ್ಜಿಯಲ್ಲಿ ಸ್ಯಾಂಕಿ ಮೇಲ್ಸೆತುವೆ ರಸ್ತೆ ಅಗಲೀಕರಣ ಬೇಡ ಎಂದು ಹೇಳಿದ್ದಾರೆ. 2 ಸಾವಿರ ಶಾಲಾ ಮಕ್ಕಳು ಬೊಮ್ಮಾಯಿ ಅಂಕಲ್ ಗೆ ಪತ್ರ ಬರೆದು ಈ ಯೋಜನೆಯಿಂದ ಪರಿಸರ ನಾಶವಾಗಲಿದೆ, ನಮ್ಮ ಶಾಲೆಗೆ ತೊಂದರೆಯಾಗಲಿದೆ ತಮ್ಮ ಮನವಿ ಸಲ್ಲಿಸಿದ್ದಾರೆ. ಆದರೂ ಮುಖ್ಯಮಂತ್ರಿಗಳು ಇವರ ಮನವಿಗೆ ಆದರೂ ಕಿವಿಗೊಟ್ಟಿಲ್ಲ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.. ಈ ಸಾರ್ವಜನಿಕರು ಸರ್ಕಾರಕ್ಕೆ 5 ಪ್ರಶ್ನೆ ಕೇಳಿದ್ದಾರೆ ಎಂದವರು ಹೇಳಿದ್ದಾರೆ.

ಸ್ಯಾಂಕಿ ಫ್ಲೈಓವರ್ ಬಗ್ಗೆ ಸಾರ್ವಜನಿಕರ ‘ಪಂಚ್’ ಪ್ರಶ್ನೆಗಳು:

  1. ಈ ಯೋಜನೆ ಉತ್ತಮ ಹಾಗೂ ಜನಪರವಾಗಿದ್ದರೆ ಈ ಯೋಜನೆ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿಲ್ಲ ಯಾಕೆ?

  2. 2020ರಲ್ಲಿ ಸರ್ಕಾರ ಮಾಡಿರುವ ಕಾಂಪ್ರಹೆನ್ಸ್ ಮೊಬಿಲಿಟಿ ಪ್ಲಾನ್ ನೀತಿಗೆ ತ್ತವಿರುದ್ಧವಾಗಿದೆಯಾ? ಬಿಎಂಎಲ್ ಟಿಎ ಗೆ (ಭೂಮಿ ಹಸ್ತಾಂತರ ಪ್ರಾಧಿಕಾರ)ಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿ ಅದರ ಅನುಮತಿ ಸಿಕ್ಕಿದೆಯಾ? ಇದರ ಮುಖ್ಯಸ್ಥರು ಯಾರೆಂದರೆ ಮುಖ್ಯಮಂತ್ರಿಗಳು. ಇದಕ್ಕೆ ಸರಿಯಾದ ಸಮಿತಿಯೇ ಇಲ್ಲ.

  3. ಕೆರೆ ಮೇಲೆ ಮೇಲ್ಸೇತುವೆ ನಿರ್ಮಾಣದಿಂದ ಪರಿಸರದ ಮೇಲೆ ಆಗುವ ಪರಿಣಾಮದ ಕುರಿತು ಅದ್ಯಯನ ಮಾಡಬೇಕು. ಅದರ ವರದಿ ಎಲ್ಲಿದೆ?

  4. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶ ಪಾಲನೆಯಾಗಿದೆಯಾ? ನ್ಯಾಯಾಧಿಕರಣದ ಆದಶದ ಪ್ರಕಾರ ಕೆರೆ ಸುತ್ತ 30 ಮೀಟರ್ ಬಫರ್ ಜೋನ್ ನಿರ್ವಹಣೆ ಮಾಡಬೇಕು. ಇದರ ಬಗ್ಗೆ ಸರ್ಕಾರ ಸಾರ್ವಜನಿಕ ದಾಖಲೆಯನ್ನು ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಯಾರಿಗೂ ಮಾಹಿತಿ ನೀಡುತ್ತಿಲ್ಲ.

  5. ಇಷ್ಟು ದೊಡ್ಡ ಯೋಜನೆಗೆ ಡಿಪಿಆರ್ ಎಲ್ಲಿದೆ? ಈ ಬಗ್ಗೆ ತಜ್ಞರ ಅಭಿಪ್ರಾಯಕೇಳಿಲ್ಲ ಯಾಕೆ..?  

ಅಶ್ವತ್ಥ್ ನಾರಾಯಣ ಅವರ ಯೋಜನೆ ಹೇಗಿದೆ ಎಂದರೆ ಅಸ್ಥಿತ್ವಕ್ಕೆ ತರಲು ಸಾಧ್ಯವಾಗದ ಯೋಜನೆ ಸಾಧ್ಯ ಮಾಡುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಉದಾಹರಣೆ ಉರಿಗೌಡ ನಂಜೇಗೌಡ ಅವರ ಕಥೆ. ಅದೇ ರೀತಿ ಅಸ್ತಿತ್ವಕ್ಕೆ ತರಲು ಸಾಧ್ಯವಾಗದ ಮೇಲ್ಸೇತುವೆ ಯೋಜನೆ ಜಾರಿಗೆ ತರಲು ಮುಂದಾಗುತ್ತಾರೆ. ಕೇವಲ 40% ಕಮಿಷನ್ ಹೊಡೆಯಲು ಈ ಯೋಜನೆಗೆ ಮುಂದಾಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ದೂರಿದರು.

ಈ ಯೋಜನೆ ಬಗ್ಗೆ ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳು ಪ್ರಶ್ನಿಸಿದಾಗ ಬಿಎಂಎಲ್‌ಟಿಎಗೆ ಪತ್ರ ಬರೆದರು. ನಂತರ ಈ ಸಮಿತಿ ರಚನೆಯಾಗಿಲ್ಲ ಹೀಗಾಗಿ ಇದನ್ನು ತಡೆ ಹಿಡಿಯಲಾಗಿದೆ ಎಂದು ಮುಚ್ಚಿಹಾಕಲು ಪ್ರಯತ್ನಿಸಿದರು. ಆದರೆ ಈ ಭಾಗದಲ್ಲಿ ಪರಿಸರ ಸಂರಕ್ಷಣೆಗಾಗಿ ಕೆರೆ ಸುತ್ತ ಫೆ.19ರಂದು ಮಕ್ಕಳು, ವೃದ್ಧರು, ಪರಿಸರ ಬಗ್ಗೆ ಕಾಳಜಿ ಇರುವ ಜಾಗೃತ ನಾಗರೀಕರು ಹೋರಾಟ ಮಾಡಿದರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗಿರುವುದು ಅಪರಾಧವಂತೆ. ಯಾವುದೇ ದೂರು ಇಲ್ಲದಿದ್ದರೂ ಸುಮೋಟೋ ಪ್ರಕರಣ ದಾಖಲಿಸಿ ಕೇಸ್ ಹಾಕಲಾಗಿದೆ ಎಂದವರು ದೂರಿದರು.

ಈ ಸರ್ಕಾರದ ಉದ್ದೇಶವೇನು? ಇವರು ಏನೇ ಮಾಡಿದರೂ ಜನರು ಕೇಳಬೇಕಾ? ಈ ಸರ್ಕಾರ ಅಮಾಯಕರ ಮೇಲೆ ದರ್ಪ ತೋರಿಸುತ್ತದೆಯೇ? ಇದೇ ದರ್ಪವನ್ನು ಲಂಚ ಪಡೆದು ಸಿಕ್ಕಿ ಬಿದ್ದಿರುವ ಮಾಡಾಳ್ ಅವರ ವಿರುದ್ಧ ಯಾಕೆ ತೋರುವುದಿಲ್ಲ. ಸಾರ್ವಜನಿಕರ ಹಿತಾಸಕ್ತಿ ಪರವಾಗಿರುವವರ ವಿರುದ್ಧ ಕೇಸ್ ಹಾಕುತ್ತಿದ್ದೀರಾ? ಇದು ಯೋಗಿ ಉತ್ತರ ಪ್ರದೇಶವಲ್ಲ. ನ್ಯಾಯದ ಪರವಾಗಿ ಹೋರಾಡುವ ಕನ್ನಡಿಗರ ಕರ್ನಾಟಕ. ಸರ್ಕಾರ ಜನರನ್ನು ಹೆದರಿಸುವುದನ್ನು ನಿಲ್ಲಿಸಲಿ. ನಾವು ಯಾವುದೇ ತಪ್ಪು ಮಾಡುತ್ತಿಲ್ಲ. ತಪ್ಪು ಮಾಡಿದವರನ್ನು ರಕ್ಷಣೆ ಮಾಡಿ, ಜನ ಪರವಾಗಿ ನಿಲ್ಲುವವರ ವಿರುದ್ಧ ನಿಲ್ಲುತ್ತೀರಾ? ಇದಕ್ಕೆ ಹೆದರಿ ನಾವು ಹಿಂದೆ ಸರಿಯುವುದಿಲ್ಲ. ನಾವು ಸದಾ ಬೆಂಗಳೂರು ಜನರ ಪರವಾಗಿ ನಿಲ್ಲುತ್ತೇವೆ ಎಂದ ಅವರು, ಚುನಾವಣೆಗೆ 1 ತಿಂಗಳು ಉಳಿದಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಭ್ರಷ್ಟ ಯೋಜನೆ ಹಾಗೂ ಸುಳ್ಳು ಕೇಸ್ ವಜಾ ಮಾಡುತ್ತೇವೆ. ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿರುವ ಪೊಲೀಸ್ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ನಮ್ಮ ಸರ್ಕಾರ ಕಾನೂನು ರೀತಿಯ ಕ್ರಮ ಕೈಗೊಳ್ಳಲಿದೆ. ಈ ಪೊಲೀಸರು ಸರ್ಕಾರದಿಂದ ಸಂಬಳ ಪಡೆಯುತ್ತಿದ್ದಾರಾ ಅಥವಾ ಬಿಜೆಪಿ ಕಚೇರಿಯಿಂದ ಸಂಬಳ ಪಡೆಯುತ್ತಿದ್ದಾರಾ? ಸರ್ಕಾರದ ಈ ಕ್ರಮವನ್ನು ಖಂಡಿಸುತ್ತೇವೆ ಎಂದರು.

ಇದೇ ವೇಳೆ, ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಅನೂಪ್ ಐಯ್ಯಾಂಗಾರ್, ಕಳೆದ ತಿಂಗಳು ಸ್ಯಾಂಕಿ ಫೈಓವರ್ ವಿರುದ್ಧ ಮಲ್ಲೇಶ್ವರಂ ನಿವಾಸಿಗಳು ಶಾಂತಿಯುತ ನಡೆ ಹಮ್ಮಿಕೊಂಡು ಸರ್ಕಾರದ ಜನವಿರೋಧಿ ಯೋಜನೆಯನ್ನು ವಿರೋಧಿಸುತ್ತಾರೆ. ಯಾರಿಗೂ ತೊಂದರೆಯಾಗದಂತೆ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗಿ, ಈ ಮೇಲ್ಸೇತುವೆ ಅಗತ್ಯವಿಲ್ಲ, ಇದು ಪರಿಸರಕ್ಕೆ ಪೂರಕವಾಗಿಲ್ಲ ಎಂದು ತಜ್ಞರ ಅಭಿಪ್ರಾಯವಿದ್ದರೂ 40% ಕಮಿಷನ್ ಗಾಗಿ ಈ ಯೋಜನೆ ಮಾಡುತ್ತಿದ್ದೀರಾ ಎಂದು ಹೇಳಿದಾಗ, ಸ್ಥಳೀಯ ಶಾಸಕ ಅಶ್ವತ್ಥ್ ನಾರಾಯಣ ಅವರು ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಮೌನ ಪ್ರತಿಭಟನೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆಮೂಲಕ ಸಾರ್ವಜನಿಕರ ವಿರುದ್ಧ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ದೂರಿದರು.

‘ಸ್ಯಾಂಕಿ ಸೇವ್’ ಅಭಿಯಾನದಲ್ಲಿ‌ ಮಂಚೂಣಿಯಲ್ಲಿರುವ ಮಲ್ಲೇಶ್ವರಂ ನಿವಾಸಿ ‘ಪ್ರೀತಿ’ ಎಂಬವರು ಮಾತನಾಡಿ, ಈ ಯೋಜನೆ ವಿರುದ್ಧ ಫೆ.19ರಂದು ಮಲ್ಲೇಶ್ವರಂ ನಿವಾಸಿಗಳು ಸೇರಿ ಶಾಂತಿಯುತ ಪ್ರತಿಭಟನೆ ಮಾಡಿದ್ದೇವೆ. ಸ್ಯಾಂಕಿ ಹಾಗೂ ಮಲ್ಲೇಶ್ವರಂ ಎಂದರೆ ನಮಗೆ ಹೆಮ್ಮೆ ಇದೆ. ಈ ಯೋಜನೆಯಿಂದ ನಮ್ಮ ಪರಂಪರೆ, ಪರಿಸರ, ಅಪರೂಪದ ಪಕ್ಷಿ ತಳಿಗಳಿಗೆ ಮಾರಕವಾಗಿದ್ದು, ಇವುಗಳ ರಕ್ಷಣೆಗೆ ನಾವು ಮೌನ ಪ್ರತಿಭಟನೆ ಮಾಡಿದ್ದೆವು. ನಮ್ಮ ಜತೆ ಮಕ್ಕಳು ಸೇರಿ ಕ್ಲೀನ್ ಸ್ಯಾಂಕಿ ಆಂದೋಲನ ಮಾಡಿದೆವು. ನಾವು ಯಾವುದೇ ಭಿತ್ತಿಪತ್ರ ಹಿಡಿದಿರಲಿಲ್ಲ, ಯಾವುದೇ ಘೋಷಣೆ ಕೂಗಲಿಲ್ಲ. ಆದರೂ ಇಲ್ಲಿ ಯಾವ ರೀತಿ ನಿಯಮ ಉಲ್ಲಂಘನೆಯಾಗಿದೆ ಎಂದು ಅರ್ಥವಾಗುತ್ತಿಲ್ಲ. ಶಾಲಾ ಮಕ್ಕಳು ನಾವು ಯಾವ ಕಾನೂನು ಉಲ್ಲಂಘನೆ ಮಾಡಿದ್ದೇವೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಎಂದರು.

ಪೊಲೀಸರನ್ನು ಬಳಸಿಕೊಂಡು ಕ್ಷೇತ್ರದಲ್ಲಿ ಜನರಲ್ಲಿ ಭಯ ಸೃಷ್ಟಿಸಿ, ಸರ್ಕಾರವನ್ನು ಯಾವುದೇ ರೀತಿ ಪ್ರಶ್ನಿಸಬಾರದು ಎಂದು ಬೆದರಿಸುತ್ತಿದ್ದಾರೆ. ಇದಕ್ಕಾಗಿ ಪೊಲೀಸರು ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ನಾವು ಸುಮ್ಮನೆ ಕೂರುವುದಿಲ್ಲ ಎಂದವರು ಹೇಳಿದರು. 

Leave a Reply

Your email address will not be published. Required fields are marked *

You may have missed