Ramalinga Reddy

ಬೆಂಗಳೂರು: ಪ್ರ’ಸ್ತುತ ಮುಖ್ಯಮಂತ್ರಿ ಸ್ಥಾನ ಸಹ ಖಾಲಿ ಇರುವುದಿಲ್ಲ ಮತ್ತು ನಾನು ಅದರ ಆಕಾಂಕ್ಷಿಯಲ್ಲ’ ಎಂದು ಸಾರಿಗೆ ರಾಮಲಿಂಗ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲವು ದಿನಗಳಿಂದ ‘RamalingaReddyForCM’ ಎಂದು ಪೋಸ್ಟ್’ಗಳು ಹರಿದಾಡುತ್ತಿವೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿರುವ ರಾಮಲಿಂಗಾ ರೆಡ್ಡಿ, ‘ರಾಜ್ಯದಲ್ಲಿ ಸರ್ಕಾರ ಸದೃಢವಾಗಿದ್ದು, ಪ್ರಸ್ತುತ ಮುಖ್ಯಮಂತ್ರಿ ಸ್ಥಾನ ಸಹ ಖಾಲಿ ಇರುವುದಿಲ್ಲ ಮತ್ತು ನಾನು ಅದರ ಆಕಾಂಕ್ಷಿಯಲ್ಲ’ ಎಂದು ತಿಳಿಸಿದ್ದಾರೆ.

‘ನನ್ನ ಮೇಲೆ ಮತ್ತು ಪಕ್ಷದ ಮೇಲೆ ಗೌರವವಿದ್ದರೆ, ದಯವಿಟ್ಟು ಈ ರೀತಿಯ ಆಧಾರರಹಿತ ಪ್ರಚಾರವನ್ನು ತಕ್ಷಣವೇ ನಿಲ್ಲಿಸಬೇಕು’ ಎಂದವರು ಮನವಿ ಮಾಡಿದ್ದಾರೆ.

‘ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಮ್ಮ ಸರ್ಕಾರ ಉತ್ತಮವಾಗಿ ಜನಪರ ಕಾರ್ಯಗಳನ್ನು ಮಾಡುತ್ತಿದೆ. ಈ ಸಮಯದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದಷ್ಟೇ ನಮ್ಮ ಗುರಿಯಾಗಿರಬೇಕು. ಪಕ್ಷ ಮತ್ತು ನಾಡಿನ ಜನತೆ ವಹಿಸಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವುದರತ್ತ ಮಾತ್ರ ನನ್ನ ಗಮನವಿದೆ’ ಎಂದವರು ಹೇಳಿದ್ದಾರೆ.

‘ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ನನ್ನ ಹಿತೈಷಿಗಳು ಯಾರೂ ಇಂತಹ ಗೊಂದಲಕಾರಿ ಪ್ರಚಾರಕ್ಕೆ ಕಿವಿಗೊಡಬಾರದು ಮತ್ತು ಇದರಲ್ಲಿ ಭಾಗಿಯಾಗಬಾರದು ಎಂದು ಮನವಿ ಮಾಡಿರುವ ರಾಮಲಿಂಗ ರೆಡ್ಡಿ,
‘ನಾವೆಲ್ಲರೂ ಒಟ್ಟಾಗಿ ಪಕ್ಷವನ್ನು ಬಲಪಡಿಸಲು ಮತ್ತು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸೋಣ’ ಎಂದಿದ್ದಾರೆ.

Leave a Reply

Your email address will not be published. Required fields are marked *

You may have missed