ಅರ್ಚಕರು ನಿಧನರಾದರೆ/ ತೀವ್ರ ಅಸ್ವಸ್ಥರಾದರೆ/ ಅಶಕ್ತರಾದರೆ ಅನುವಂಶಿಕ ಹಕ್ಕು ವರ್ಗಾವಣೆ ಸುಲಭ.. ಸಚಿವ ರಾಮಲಿಂಗ ರೆಡ್ಡಿ ಚಾರಿತ್ರಿಕ ಕ್ರಮ
ಬೆಂಗಳೂರು: ರಾಜ್ಯದ ಮುಜರಾಯಿ ದೇವಾಲಯಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತೊಂದು ಚಾರಿತ್ರಿಕ ಆದೇಶ ಪ್ರಕಟಿಸಿದೆ. ಈ ಮೂಲಕ ಅರ್ಚಕರ ಸಮೂಹದ ಕೋರಿಕೆ ಈಡೇರಿದೆ.
ರಾಜ್ಯದ ‘ಸಿ’ ವರ್ಗದ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನುವಂಶಿಕ ಅರ್ಚಕರು ಮರಣ ಹೊಂದಿದ ಸಂದರ್ಭದಲ್ಲಿ/ ಗಂಭೀರವಾಗಿ ಅಸ್ವಸ್ಥರಾದಲ್ಲಿ / ಅಶಕ್ತರಾದಲ್ಲಿ ಅನುವಂಶಿಕ ಹಕ್ಕನ್ನು ವರ್ಗಾಯಿಸುವ ಸರಳ ಕ್ರಮ ಕೈಗೊಳ್ಳಬೇಕೆಂಬ ಬಹುಕಾಲದ ಬೇಡಿಕೆಗೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ಅಸ್ತು ಎಂದಿದ್ದಾರೆ. ಈ ಸಂಬಂಧ ಸರಕಾರ ಮಹತ್ವದ ಆದೇಶ ಹೊರಡಿಸಿದೆ.
ಸಚಿವರ ಆದೇಶದ ಹಿನ್ನೆಲೆಯಲ್ಲಿ ಸರ್ಕಾರ ಕೂಡಾ ಈ ಕುರಿತು ಆದೇಶ ಹೊರಡಿಸಿದ್ದು ಅರ್ಚಕರ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಸರ್ಕಾರದ ಆದೇಶ ಸಂಖ್ಯೆ: ಕಂಇ 31 ಮುಸೇವಿ 2021 ದಿನಾಂಕ 21.08.2021ರಂತೆ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ‘ಸಿ’ ವರ್ಗದ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನುವಂಶಿಕ ಅರ್ಚಕರು ಮರಣ ಹೊಂದಿದ ಸಂದರ್ಭದಲ್ಲಿ, ತೀವ್ರ ಅಸ್ವಸ್ಥರಾದಲ್ಲಿ ಅಥವಾ ಅಶಕ್ತರಾದಲ್ಲಿ ಅನುವಂಶಿಕ ಹಕ್ಕನ್ನು (ಬರಾಬರ್ದ್) ವರ್ಗಾಯಿಸುವ ಅಧಿಕಾರವನ್ನು ತಿದ್ದುಪಡಿ ಮಾಡಿ ಆದೇಶ ಹೊರಡಿಸಲಾಗಿದೆ.
ಪ್ರಸ್ತುತ, ಅರ್ಚಕರ ಸಂಘದವರ ಬೇಡಿಕೆಯಂತೆ, ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ʼʼಸಿ” ವರ್ಗದ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನುವಂಶಿಕ ಅರ್ಚಕರು, ವಯಸ್ಸಾದ ಸಂದರ್ಭದಲ್ಲಿ ಹಾಗೂ ತೀವ್ರ ರೀತಿಯ ಅನಾರೋಗ್ಯದ ಕಾರಣದಿಂದಾಗಿ ಅರ್ಚಕರಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಿದ್ದರೆ, ಅಶಕ್ತರಾದ ಸಂದರ್ಭಗಳಲ್ಲಿಯೂ ಸಹ ಅನುವಂಶಿಕ ಹಕ್ಕನ್ನು (ಬರಾಬರ್ದ್) ಅವರ ಕಾನೂನು ಬದ್ದ ವಾರಸುದಾರರಿಗೆ ವರ್ಗಾಯಿಸಬಹುದಾಗಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ. ಈ ಅಧಿಕಾರವನ್ನು ಸಂಬಂಧಪಟ್ಟ ತಹಶೀಲ್ದಾರ್ ರವರಿಗೆ ನೀಡಿ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.