‘ಶಕ್ತಿಯಿಂದ KSRTC ಆದಾಯ ಹೆಚ್ಚಿದೆ, ಆದ್ರೆ ಆದಾಯವೇ ಬೇರೆ ಲಾಭವೇ ಬೇರೆ’; ಟಿಕೆಟ್ ದರ ಏರಿಕೆ ಕುರಿತ ಟೀಕೆಗೆ ರಾಮಲಿಂಗ ರೆಡ್ಡಿ ಎದಿರೇಟು

0

ಬೆಂಗಳೂರು: ಸುಳ್ಳು ಹೇಳುವುದು, ಜನರ ದಾರಿ ತಪ್ಪಿಸುವುದು ತಮಗೆ ಮತ್ತು ತಮ್ಮ ಬಿ.ಜೆ‌.ಪಿ ಪಕ್ಷಕ್ಕೆ ಸಿದ್ದಿಸಿರುವ ಕಲೆ. ನಮಗೆ ಅದರ ಅವಶ್ಯಕತೆಯಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ. ಇಂದೇ ಸ್ಥಳ ಮತ್ತು ಸಮಯವನ್ನು ನಿಗದಿ ಮಾಡಿ ನಾನು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ‌ ಎಂದವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ 3,930 ಕೋಟಿ ರೂಪಾಯಿ ದಾಖಲೆ ಆದಾಯ ಬರುತ್ತದೆ ಎಂದು ಬೊಗಳೆ ಬಿಟ್ಟು ತನ್ನ ಬೆನ್ನು ತಾನೇ ತಟ್ಟಿಕೊಂಡಿದ್ದ ಕಾಂಗ್ರೆಸ್ ಸರ್ಕಾರ ಈಗ ಕಳೆದ ತ್ರೈಮಾಸಿಕದಲ್ಲಿ ₹295 ಕೋಟಿ ನಷ್ಟವಾಗಿದೆ ಎಂಬ ನೆಪವೊಡ್ಡಿ ಟಿಕೆಟ್ ದರವನ್ನ ಶೇ.25%ರಷ್ಟು ಹೆಚ್ಚಿಸಲು ಮುಂದಾಗಿದೆ’ ಎಂಬ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಟೀಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಅಂಕಿಅಂಶಗಳೇ ನಮ್ಮ‌ ಅಭಿವೃದ್ಧಿಗೆ ಹಾಗೂ ಸಾಧನೆಗೆ ಮಾನದಂಡ ಎಂಬುದನ್ನು ಹತ್ತು ಹಲವು ಬಾರಿ ತಿಳಿಸಿದ್ದೇನೆ‌. ಸಾರಿಗೆ ಸಂಸ್ಥೆಗಳನ್ನು ಅಧೋಗತಿ ತಂದು ನಿಲ್ಲಿಸಿರುವುದು ತಮ್ಮ ಪಕ್ಷದ ಅಧಿಕಾರಾವಧಿಯಲ್ಲಿ ಎಂಬುದಕ್ಕೆ ಶ್ಚೇತಪತ್ರ ಹೊರಡಿಸಿ ತಮ್ಮ ಅವಧಿಯ ಆಡಳಿತವನ್ನು ಜನರಿಗೆ ತೋರಿಸಬೇಕೆಂಬ ತಮ್ಮ ಮಹದಾಸೆಗೆ ನಾವು ಅಭಾರಿ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿದ್ದಾರೆ.

ನಮ್ಮ ಸರ್ಕಾರದ‌ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳ ಆದಾಯದಲ್ಲಿ‌ ಗಣನೀಯ ವೃದ್ಧಿಯಾದರೂ ಸಾರಿಗೆ ಸಂಸ್ಥೆಗಳಿಗೆ ಶಕ್ತಿ ತುಂಬಲು ಸಾಧ್ಯವಾಗಿಲ್ಲದಿರುವುದು ತಮ್ಮ ಸರ್ಕಾರದ ಕೊಡುಗೆ. ಶಕ್ತಿ ಯೋಜನೆಯಿಂದ ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ 84 ಲಕ್ಷದಿಂದ 1.08 ಕೋಟಿಗೆ ಏರಿಕೆ ಆಗಿದೆ. ಆದಾಯದಲ್ಲಿ ಗಣನೀಯ ವೃದ್ಧಿ ಆಗಿದೆ. ನಾವು ಈಗಾಗಲೇ ಹಲವು ಬಾರಿ ತಿಳಿಸಿದ್ದೇನೆ, ಆದಾಯವೇ ಬೇರೆ ಲಾಭವೇ ಬೇರೆ. ಆದಾಯದಲ್ಲಿ ಗಣನೀಯ ಹೆಚ್ಚಳವಾಗಿದ್ದರೂ ಸಹ ಲಾಭವನ್ನು ಗಳಿಸಲು ಸಾಧ್ಯವಿಲ್ಲ, ಏಕೆಂದರೆ ತಮ್ಮ ಪಕ್ಷದವರು ಬಾಕಿ ಇಟ್ಟು ಹೋಗಿರುವ ರೂ.5900 ಕೋಟಿ ನಷ್ಟ ಸಾರಿಗೆ ಸಚಿವರಾಗಿ, ಹಲವು ಬಾರಿ ಅನೇಕ ಖಾತೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರೂ, ಈ ಬಗ್ಗೆ ತಮಗೆ ಅರ್ಥವಾಗದಿದ್ದರೆ ನಾನು ಏನು ಮಾಡಲು ಸಾಧ್ಯ. ಈ ಬಗ್ಗೆ ಕೂಲಂಕುಷವಾಗಿ ಮಾಹಿತಿ ಸಂಗ್ರಹಿಸಿ ನಂತರ ಟ್ಟೀಟ್ ಮಾಡಿದರೆ‌ ಒಳಿತು ಎಂದು ತಿರುಗೇಟು ನೀಡಿದ್ದಾರೆ.

ತಮ್ಮ ಬಿ.ಜೆ.ಪಿ ಪಕ್ಷದ ಆಡಳಿತದ ಐದು ವರ್ಷಗಳಲ್ಲಿ ಯಡಿಯೂರಪ್ಪ‌ ಹಾಗೂ ಬೊಮ್ಮಾಯಿ ಮಾನ್ಯ ಮುಖ್ಯಮಂತ್ರಿಗಳಾಗಿದ್ದಾಗ ಸಾರಿಗೆ ಸಂಸ್ಥೆಗಳನ್ನು ರೂ.5900 ಕೋಟಿ ನಷ್ಟದಲ್ಲಿಟ್ಟು ಹೋಗಿದ್ದಾರೆ. ಕಳೆದ 5 ವರ್ಷಗಳಲ್ಲಿ ಬಿ.ಎಂ.ಟಿ ಸಿ‌ ಹೊರತುಪಡಿಸಿ ಬೇರೆ ಯಾವುದೇ‌ ಸಾರಿಗೆ ನಿಗಮಗಳಿಗೆ ಬಸ್‌ಗಳ ಸೇರ್ಪಡೆಯೇ ಮಾಡದೆ, ಡಕೋಟ ಬಸ್ಸುಗಳನ್ನು ಕಾರ್ಯಾಚರಣೆ‌ ಮಾಡಲು ಬಿಟ್ಟು ಹೋಗಿದ್ದೀರಾ. ನಮ್ಮ ಸರ್ಕಾರ 6200 ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಕಳೆದೊಂದು ವರ್ಷದಲ್ಲಿಯೇ 3450 ಹೊಸ ಬಸ್ಸುಗಳ ಸೇರ್ಪಡೆಯಾಗಿದೆ. ಡಕೋಟಾ ಬಸ್ಸುಗಳನ್ನು‌ ಪುನಶ್ಚೇತನ‌ ಮಾಡುವ ಕಾರ್ಯವನ್ನು ಸಹ ಕೈಗೆತ್ತಿಕೊಂಡು 1300 ಬಸ್ಸುಗಳ ಪುನಶ್ಚೇತನ ‌ಕಾರ್ಯ‌ಮಾಡಿದ್ದೇವೆ ಎಂದು ರಾಮಲಿಂಗ ರೆಡ್ಡಿ, ಹೇಳಿದ್ದಾರೆ.

ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ‌ ಹಾಗೂ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13888 ಹುದ್ದೆಗಳು ಖಾಲಿ ಇದ್ದರೂ ( ನಿವೃತ್ತಿ ಇನ್ನಿತರೆ ಕಾರಣಗಳಿಂದ ) ಒಂದೇ ಒಂದು‌ ನೇಮಕಾತಿ ಮಾಡಿಲ್ಲ. ನಮ್ಮ ಸರ್ಕಾರ ಬಂದ ಕೂಡಲೇ 9000 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದ್ದು, ಈಗಾಗಲೇ 5800 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳು ವಿವಿಧ ಹಂತದಲ್ಲಿವೆ. ‘ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ತಿಂಗಳ ವೇತನ ಪೂರ್ಣ ಪಾವತಿಯಾಗದೆ , ಅರ್ಧವೇತನ ,ಕೆಲವೊಮ್ಮೆ ಆ ವೇತನವೂ ತಿಂಗಳ ಕೊನೆಯವರೆಗೂ, ಒಮ್ಮೊಮ್ಮೆ ಮುಂದಿನ ತಿಂಗಳವರೆಗೂ ಪಾವತಿಯಾಗುತ್ತಿತ್ತು ಈ ಬಗ್ಗೆ ತಮಗೆ ಮಾಹಿತಿ ಇಲ್ಲವೇ? ನಮ್ಮ ಸರ್ಕಾರ ಬಂದ ಮೇಲೆ ನಿಗದಿತ ದಿನಾಂಕದಂದು ನೌಕರರಿಗೆ ವೇತನ ಪಾವತಿಯಾಗುತ್ತಿದೆ ಎಂದೂ ರಾಮಲಿಂಗ ರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಸಾರಿಗೆ ಸಂಸ್ಥೆಗಳಲ್ಲಿ ಹತ್ತು ಹಲವು ಕಾರ್ಮಿಕ‌ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಕಳೆದ ಏಳೆಂಟು ವರ್ಷಗಳಿಂದ ಬಾಕಿ ಉಳಿದಿದ್ದ 1000 ಕ್ಕೂ ಅಧಿಕ ಮೃತ ಅವಲಂಬಿತ‌ ಕುಟುಂಬಗಳಿಗೆ ಅನುಕಂಪ ಆಧಾರದಲ್ಲಿ ಹುದ್ದೆ ನೀಡಲಾಗಿದೆ ಕಳೆದ‌ 5 ವರ್ಷದಲ್ಲಿ ತಮ್ಮ ಸರ್ಕಾರ ಸಂಪೂರ್ಣ ನಿಲ್ಲಿಸಿದ್ದ ಪ್ರಕ್ರಿಯೆ ಇದು. ತಮ್ಮ ಸರ್ಕಾರವು ಬಿಟ್ಟು ಹೋಗಿದ್ದ ರೂ.5900 ಕೋಟಿ‌ ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ‌ ಡೀಸೆಲ್ ಹಣ, ಸಿಬ್ಬಂದಿಭವಿಷ್ಯ ನಿಧಿ , ಖರೀದಿ ಸಾಮಾಗ್ರಿಗಳ ಹಣ ಸೇರಿ ಎಲ್ಲಾ ಬಾಕಿ ಗಳನ್ನು ತೀರಿಸುವ ಹೊಣೆಗಾರಿಕೆ ಹೊತ್ತುಕೊಂಡು ನಾವು ಸಂಸ್ಥೆಗಳನ್ನು ಮುನ್ನಡೆಸಬೇಕಾಗಿದೆ ಎಂಬ ಪರಿಸ್ಥಿತಿ ಬಗ್ಗೆಯೂ ರಾಮಲಿಂಗ ರೆಡ್ಡಿ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed