ಪಿಎಸ್ಐ ಹತ್ಯೆ ಪ್ರಕರಣ ; ಆರೋಪಿಗಳು 14 ದಿನ ಪೊಲೀಸ್ ಕಸ್ಟಡಿಗೆ
ಪಿಎಸ್ಐ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸ್ ಅಧಿಕಾರಿಯನ್ನು ಕೊಲೆಗೈದ ಹಂತಕರಿಗಾಗಿ ಬೇಟೆ ಕೈಗೊಂಡ ಪೊಲೀಸರು ದೂರದ ನಾಗಪುರದಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆ ತಂದಿದ್ದಾರೆ.
ಈ ತಿಂಗಳ 19 ರಂದು ಸೆರೆ ಸಿಕ್ಕಿದ್ದ ಕುಖ್ಯಾತ ಕಳ್ಳರಾದ ಹರೀಶ್ ಬಾಬು ಮತ್ತು ಮಧುನನ್ನು ಬುಧವಾರ ರಾತ್ರಿ 10.45ರ ಸುಮಾರಿಗೆ ವಿಮಾನದಲ್ಲಿ ಬೆಂಗಳೂರಿಗೆ ಕರೆತರಲಾಗಿತ್ತು.
ಗುರುವಾರ ನೆಲಮಂಗಲ ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು, ಭಿನ್ನಮಂಗಲದ ವಿನಾಯಕ ಲೇಔಟ್ ಬಳಿ ಸ್ಥಳ ಮಹಜರು ನಡೆಸಿದರು. ಬಳಿಕ ನೆಲಮಂಗಳದ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪರಿಗಳನ್ನು ವೈದ್ಯಕೀಯ ಪರೀಕ್ಷೆಗೆ ಗುರಿ ಪಡಿಸಲಾಯಿತು.
ಮಧ್ಯಾಹ್ನ ನಂತರ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಪೊಲೀಸರು ಹಾಜರು ಪಡಿಸಲಾಯಿತು. ಈ ಸುದ್ದಿ ತಿಳಿದ ಸಾರ್ವಜನಿಕರು, ಭಾರೀ ಸಂಖ್ಯೆಯಲ್ಲಿ ನೆಲಮಂಗಳದ ನ್ಯಾಯಾಧೀಶ ಪ್ರಕಾಶ ಅವರ ನಿವಾಸದೆದುರು ಜಮಾಯಿಸಿದರು. ಆರೋಪಿಗಳನ್ನು ಜಡ್ಜ್ ಮುಂದೆ ಹಾಜರು ಪಡಿಸುತ್ತಿದ್ದಂತೆ ಸಾರ್ವಜನಿಕರು ಘೋಷಣೆ ಕೂಗುತ್ತಾ ಬಂಧಿತರನ್ನು ತಮಗೆ ಒಪ್ಪಿಸುವಂತೆ ಒತ್ತಾಯಿಸಿದರು. ನಾವೇ ಅವರಿಗೆ ಬುದ್ಧಿ ಕಲಿಸುತ್ತೇವೆ ಎಂದರು. ಈ ಪ್ರಸಂಗದಿಂದಾಗಿ ಸ್ಥಳದಲ್ಲೇ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಈ ನಡುವೆ, ಪೊಲೀಸ್ ಅಧಿಕಾರಿಯನ್ನು ಕೊಲೆಗೈದಿರುವ ಈ ಆರೋಪಿಗಳು, ಹತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ. ಹಾಗಾಗಿ 14 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಧೀಶರನ್ನು ಕೋರಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಾಧೀಶರಾದ ಪ್ರಕಾಶ್ ಅವರು, ಆರೋಪಿಗಳಿಬ್ಬರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.