ಸಿಎಂ ವಿರುದ್ದದ ಪ್ರಾಸಿಕ್ಯೂಷನ್; ಹೈಕೋರ್ಟ್‌ನಲ್ಲಿ ತಡೆ ಸಿಗುವ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರು

ಬೆಂಗಳೂರು: ಮುಡಾ ಅಕ್ರಮ ಆರೋಪ ಕುರಿತಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ಕ್ರಮಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ನಿಯಮ ಪಾಲಿಸದೆ ಇದ್ದರೂ ಅನುಮತಿ ನೀಡಿದ್ದಾರೆ. ಹಾಗಾಗಿ ಈ ಪ್ರಕರಣ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಪ್ರಕರಣ ವಿಚಾರಣೆಗೆ ಹೋದ ತಕ್ಷಣ ಇದಕ್ಕೆ ತಡೆಯಾಜ್ಞೆ ಸಿಗುತ್ತದೆ ಎಂದು ಬಿ.ಎಲ್. ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಲ್. ಶಂಕರ್, ರಾಜಕೀಯ ಪ್ರೇರಿತ ನಡೆಯುವುದಕ್ಕೆ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ. ಎಲ್ಲಾ ನಿಯಮಗಳನ್ನು ಪಾಲಿಸಿ ಪ್ರಕರಣಕ್ಕೆ ಅನುಮತಿ ನೀಡಿ ಎಂದು ಕೇಳಿದಾಗ ರಾಜ್ಯಪಾಲರು ಅನುಮತಿ ನೀಡಿರಲಿಲ್ಲ. ಆದರೆ ಈಗ ನಿಯಮ ಪಾಲಿಸದೆ ಇದ್ದರೂ ಅನುಮತಿ ನೀಡಿದ್ದಾರೆ ಎಂದು ದೂರಿದ್ದಾರೆ.

ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ತನಿಖೆಗೆ ಅನುಮತಿ ನೀಡಿ ಎಂದು ಈ ಹಿಂದೆ ಕೇಳಿರುವ ನಾಲ್ಕು ಪ್ರಕರಣಗಳು ನಿಮ್ಮ ಮುಂದೆ ಬಾಕಿ ಇವೆ. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ್ ರೆಡ್ಡಿ ಅವರ ಮೇಲೆ ತನಿಖೆ ನಡೆಸಲು ಲೋಕಾಯುಕ್ತ ಅನುಮತಿ ಕೇಳಿದ್ದರೂ ನೀಡಿಲ್ಲ ಎಂದವರು ಹೇಳಿದ್ದಾರೆ.

ಮುಖ್ಯಮಂತ್ರಿಗಳ ಜೊತೆಗೆ ಇಡೀ ಕಾಂಗ್ರೆಸ್ ಪಕ್ಷ ನಿಂತಿದೆ ಎಲ್ಲಾ ಶಾಸಕರು, ಮುಖಂಡರು, ಕಾರ್ಯಕರ್ತರು ಅವರ ಪರವಾಗಿ ನಿಂತಿದ್ದೇವೆ. ಹೈಕಮಾಂಡ್ ಸಹ ಸಿದ್ದರಾಮಯ್ಯ ಅವರ ಪರವಾಗಿದೆ ಎಂದ ಅವರು, ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಜನಸ್ಪಂದನ ಸಮಾವೇಶದಲ್ಲಿ ಅಪಾರ ಜನ ಬೆಂಬಲ ಸಿದ್ದರಾಮಯ್ಯ ಅವರಿಗೆ ಸಿಕ್ಕಿದೆ. ಕರ್ನಾಟಕದಲ್ಲಿ ಮುಂಚೂಣಿಯಲ್ಲಿರುವ ಅತಿ ಜನಪ್ರಿಯ ನಾಯಕರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು. ಜನಬೆಂಬಲ, ಪಕ್ಷದ ಬೆಂಬಲ ಸೇರಿದಂತೆ ಸಂವಿಧಾನದ ಮತ್ತು ಕಾನೂನಿನ ಬೆಂಬಲ ಇರುವಂತಹ ಸಿದ್ದರಾಮಯ್ಯ ಅವರನ್ನು ಅನೈತಿಕ ಮಾರ್ಗದ ಮೂಲಕ ಅಧಿಕಾರದಿಂದ ಕೆಳಕ್ಕೆ ಇಳಿಸಲು ಹುನ್ನಾರ ಮಾಡಲಾಗುತ್ತಿದೆ ಎಂದರು.

ಈ ಹೊನ್ನಾರದ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟವನ್ನು ರೂಪಿಸುತ್ತದೆ. ಜನರ ಬಳಿಗೆ ಹೋಗಿ ಸತ್ಯವನ್ನು ತಿಳಿಸುವ ಕೆಲಸ ಮಾಡುತ್ತದೆ. ಎಲ್ಲಿಯವರೆಗೆ ನ್ಯಾಯ ಸಿಗುವುದಿಲ್ಲವೋ ಅಲ್ಲಿಯ ತನಕ ಈ ಹೋರಾಟ ಮುಂದುವರಿಯುತ್ತದೆ ಎಂದ ಬಿ.ಎಲ್.ಶಂಕರ್, ಮೂಡ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಕಿಂಚಿತ್ತು ಇಲ್ಲ. ಇದಕ್ಕೆ ಸಾಕ್ಷಿಗಳು ಇಲ್ಲ. ಈ ಪ್ರಕರಣ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಪ್ರಕರಣ ವಿಚಾರಣೆಗೆ ಹೋದ ತಕ್ಷಣ ಇದಕ್ಕೆ ತಡೆಯಾಜ್ಞೆ ಸಿಗುತ್ತದೆ.

You may have missed