ಪವರ್ ಪಾಲಿಟಿಕ್ಸ್: ‘ಉಚಿತ ವಿದ್ಯುತ್ ಭರವಸೆ ಬಗ್ಗೆ ಚರ್ಚೆಗೆ ಬನ್ನಿ..’ ಸಿಎಂಗೆ ‘ಕೈ’ ಸವಾಲ್

0

ಬೆಂಗಳೂರು ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಗೃಹ ಜ್ಯೋತಿಯನ್ನು ಮುಖ್ಯಮಂತ್ರಿಗಳು ಬೋಗಸ್ ಯೋಜನೆ ಎಂದು ಕರೆದಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. ಮಾಧ್ಯಮ ವೇದಿಕೆಯಾದರೂ ಸರಿ, ಬಹರಂಗ ವೇದಿಕೆಯಾದರೂ ಸರಿ ಮುಖ್ಯಮಂತ್ರಿಗಳು ಚರ್ಚೆಗೆ ಬರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ‘ನಾನು ನಾಲ್ಕೂವರೆ ವರ್ಷಗಳ ಕಾಲ ಇಂಧನ ಸಚಿವನಾಗಿದ್ದೆ. ರಾಜ್ಯದಲ್ಲಿ 10 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ನನ್ನ ಅವಧಿಯಲ್ಲಿ 20 ಸಾವಿರ ಮೆ.ವ್ಯಾಟ್ ಗೆ ಏರಿಸಲಾಗಿತ್ತು. ನಮ್ಮ ಸರ್ಕಾರದ ಸಾಧನೆ ಫಲವಾಗಿ ರಾಜ್ಯ ಸರ್ಕಾರ ಹೆಚ್ಚುವರಿ ವಿದ್ಯುತ್ ಮಾರಾಟದಿಂದ 3 ಸಾವಿರಕ್ಕೂ ಹೆಚ್ಚು ಕೋಟಿ ಆದಾಯ ಪಡೆಯುತ್ತಿದೆ. ರಾಜ್ಯಪಾಲರ ಭಾಷಣದಲ್ಲಿ ಈ ಅಂಶ ಉಲ್ಲೇಖವಾಗಿದೆ. ಇನ್ನು ಬಿಜೆಪಿ ಸರ್ಕಾರ 2018ರ ತನ್ನ ಪ್ರಣಾಳಿಕೆಯಲ್ಲಿ ರೈತರಿಗೆ ನೀಡುವ ವಿದ್ಯುತ್ ಅನ್ನು 7 ಗಂಟೆಯಿಂದ 10 ಗಂಟೆಗೆ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದರು. ಇದರಿಂದ 6 ಸಾವಿರ ಕೋಟಿ ವೆಚ್ಚ ತಗಲುತ್ತದೆ. ಅವರು ಯಾವ ಲೆಕ್ಕದಲ್ಲಿ ಈ ಭರವಸೆ ನೀಡಿದ್ದರು. ಬಿಜೆಪಿ ಕೊಟ್ಟ 600 ಭರವಸೆಗಳಲ್ಲಿ 550 ಭರವಸೆ ಈಡೇರಿಸಿಲ್ಲ. ಈ ಬಗ್ಗೆ ದಿನನಿತ್ಯ ಪ್ರಶ್ನೆ ಕೇಳುತ್ತಿದ್ದರೂ ಅವರು ಒಂದಕ್ಕೂ ಉತ್ತರ ನೀಡುತ್ತಿಲ್ಲ ಎಂದರು.

ಕೇಂದ್ರ ಇಂಧನ ಸಚಿವರು ವಿದ್ಯುತ್ ಇಲಾಖೆಯನ್ನು ಖಾಸಗಿಕರಣ ಮಾಡುವುದಾಗಿ ಚರ್ಚೆ ಮಾಡಿದ್ದಾರೆ. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಇನ್ನು 120 ತಾಲೂಕುಗಳಲ್ಲಿ ಸೋಲಾರ್ ಪಾರ್ಕ್ ಮಾಡಿ ವಿದ್ಯುತ್ ವರ್ಗಾವಣೆ ನಷ್ಟವನ್ನು ತಗ್ಗಿಸಿದ್ದೇವೆ. ಆಮೂಲಕ ದೇಶಕ್ಕೆ ಮಾದರಿಯಾಗಿದ್ದೇವೆ. ಕೇಂದ್ರದ ಸಚಿವಾಲಯದ ಪ್ರತಿ ಸಭೆಯಲ್ಲಿ ಕರ್ನಾಟಕ ಮಾದರಿ ಅನುಸರಿಸುವಂತೆ ಉಲ್ಲೇಖ ಮಾಡಿದ್ದಾರೆ ಎಂದ ಅವರು, ಕಾಂಗ್ರೆಸ್ ಪಕ್ಷದ ಗೃಹಜ್ಯೋತಿ ಯೋಜನೆಯನ್ನು ನಾವು ಜಾರಿ ಮಾಡದಿದ್ದರೆ ನಾನು, ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್ ಅವರು ರಾಜಕಾರಣದಲ್ಲಿ ಮುಂದುವರಿಯುವುದಿಲ್ಲ. ಕಾಂಗ್ರೆಸ್ ಪಕ್ಷದ ವತಿಯಿಂದ 200 ಯುನಿಟ್ ವಿದ್ಯುತ್ ಉಚಿತ, ಮನೆಯೊಡತಿಗೆ 2 ಸಾವಿರ ಖಚಿತ ಹಾಗೂ 10 ಕೆ.ಜಿ ಅಕ್ಕಿ ನಿಶ್ಚಿತ ಎಂದರು.

Leave a Reply

Your email address will not be published. Required fields are marked *

You may have missed