ಡಿಕೆಶಿ ಕೇಸ್‌ಗೆ ‘ಬಿ ರಿಪೋರ್ಟ್’ ಸನ್ನಿಹಿತ.?
ಬೆಂಗಳೂರು: ‘ನನ್ನ ಮೇಲಿನ ಕೇಸ್ ಗೆ ಬಿ ರಿಪೋರ್ಟ್ ಬರೆಯುವ ಕಾಲ ಬರುತ್ತದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆಗೆ ರಣತಂತ್ರ ರೂಪಿಸುವ ಸಂಬಂಧ ಮಂತ್ರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರ ಜೊತೆ ಮಾತನಾಡಿದ ಡಿಕೆಶಿ, ತಮ್ಮ ವಿರುದ್ಧ ಪ್ರಕರಣಗಳ ಬಗ್ಗೆ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದರು.
ಡಿ.ಕೆ. ಶಿವಕುಮಾರ್ ಅವರಿಗೆ ಐಟಿ, ಇಡಿ ನೋಟೀಸ್ ಕಿರುಕುಳ ಆರಂಭವಾಗಿದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಗ ಆ ವಿಚಾರ ಬೇಡ. ಯಾರು ನೋಟಿಸ್ ನಿಡುತ್ತಾರೋ, ಏನು ಮಾಡುತ್ತಾರೋ ಮಾಡಲಿ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ದಾಖಲಿಸಿರಬಹುದು. ನನ್ನ ಎಲ್ಲಾ ದಾಖಲೆಗಳು ಸಾರ್ವಜನಿಕವಾಗಿದೆ. ನಾನು ಹಾಗೂ ನನ್ನ ಹೆಂಡತಿ ಇಬ್ಬರೂ ತೆರಿಗೆ ಪಾವತಿದಾರರು. ಒಂದೇ ಕುಟುಂಬವಾದರೂ ನನ್ನು ಬೇರೆ, ಆಕೆಯದ್ದು ಬೇರೆ. ನಾನು ಹೆಚ್ಚಿಗೆ ಆಸ್ತಿ ಗಳಿಕೆ ಮಾಡಿದ್ದೇನಾ ಇಲ್ಲವೇ ಎಂದು ನೀವೇ ಲೆಕ್ಕ ಹಾಕಬಹುದು. ಇದು ಸಿಬಿಐಗೆ ನೀಡುವ ಪ್ರಕರಣವಲ್ಲ ಎಂದು ಅಡ್ವಕೇಟ್ ಜೆನರಲ್ ಹೇಳಿದ್ದರೂ ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಈ ಪ್ರಕರಣವನ್ನು ಸಿಬಿಐಗೆ ನೀಡಿದ್ದಾರೆ. ನೋಟೀಸ್ ಕೊಡುವುದಾದರೆ ಕೊಡಲಿ. ನಾನು ಅದಕ್ಕೆ ಉತ್ತರ ನೀಡುತ್ತೇನೆ. ಬಿ ರಿಪೋರ್ಟ್ ಬರೆಯುವ ಕಾಲ ಬರುತ್ತದೆ” ಎಂದು ತಿಳಿಸಿದರು.