ಪೇಜಾವರ ಶ್ರೀಗಳ ತಂದೆ ಕೃಷ್ಣ ಭಟ್ ವಿಧಿವಶ
ಮಂಗಳೂರು: ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥರ ತಂದೆ ವಿಧಿವಶರಾಗಿದ್ದಾರೆ.
ಪೇಜಾವರ ಶ್ರೀಗಳ ತಂದೆ ಅಂಗಡಿಮಾರ್ ಕೃಷ್ಣ ಭಟ್ ಅವರು ವಯೋ ಸಹಜ ಸ್ಥಿತಿಯಲ್ಲಿದ್ದರು 102 ವರ್ಷ ಹರೆಯದ ಅವರು ಹಳೆಯಂಗಡಿ ಸಮೀಪದ ಪಕ್ಷಿಕೆರೆಯಲ್ಲಿರುವ ಸ್ವಗೃಹದಲ್ಲಿ ಬಾನುವಾರ ರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೃಷ್ಣ ಭಟ್ಟರು ಪುತ್ರ ವಿಶ್ವೇಶ್ವರ ಭಟ್ ಜೊತೆ ವಾಸವಿದ್ದರು. ಕೃಷಿಯ ಜೊತೆ, ವೈದಿಕ ವಿದ್ವಾಂಸರೂ ಆಗಿದ್ದ ಅವರು, ತುಳು ಲಿಪಿಕಾರರಾಗಿ, ಪಂಚಾಂಗ ಕರ್ತರಾಗಿ, ಭಜನೆ, ಪ್ರಾರ್ಥನಾ ಶ್ಲೋಕಗಳ ರಚನೆ ಮೂಲಕ ಆಸ್ತಿಕ ಗಮನಸೆಳೆದಿದ್ದರು. ಹಲವು ಪ್ರಶಸ್ತಿಗಳನ್ನು ಅವರು ಪಡೆದಿದ್ದರು. ಇವರ 12 ಮಕ್ಕಳ ಪೈಕಿ ಪೇಜಾವರ ಶ್ರೀಗಳು 8ನೇ ಮಗ.
ಕೃಷ್ಣ ಭಟ್ಟರು ವೈದಿಕ ಪರಂಪರೆಯ ಸಾಧಕರು; ಪ್ರದೀಪ್ ಕಲ್ಕೂರ
ತುಳು-ಕನ್ನಡ-ಸಂಸ್ಕೃತ ಬಾಷಾ ಪಾಂಡಿತ್ಯದಿಂದಾಗಿ ಸಾರಸ್ವತ ಹಾಗೂ ವೈದಿಕ ಕ್ಷೇತ್ರದಲ್ಲಿ ಅಂಗಡಿಮಾರ್ ಕೃಷ್ಣ ಭಟ್ಟರು ಗುರು ಶ್ರೇಷ್ಠರೆನಿಸಿದ್ದರು. ಅಗಾಧ ಸಾಧನೆ ಮಾಡಿರುವ ಇವರು ನೂರಾರು ಮಂದಿಗೆ ತಮ್ಮದೇ ಆದ ರೀತಿ ಶಿಕ್ಷಣ ನೀಡಿ ವೈದಿಕ ಪರಂಪರೆಯನ್ನು ಗಟ್ಟಿಗೊಳಿಸಿದವರು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕಲ್ಕೂರ ಹೇಳಿದ್ದಾರೆ.
ಕೃಷ್ಣ ಭಟ್ಟರ ನಿಧನ ಬಗ್ಗೆ ದುಃಖ ವ್ಯಕ್ತಪಡಿಸಿರುವ ಪ್ರದೀಪ್ ಕಲ್ಕೂರ ಅವರು, ಕೃಷ್ಣ ಭಟ್ಟರು ಕನ್ಯಾಕುಮಾರಿಯ ದೇಗುಲದ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ನೂರಾರು ಮಂದಿಗೆ ಶಿಕ್ಷಣ ನೀಡಿ ವೈದಿಕ ಪರಂಪರೆಯನ್ಬು ಗಟ್ಟಿಗೊಳಿಸಿದವರು. ತುಳು-ಕನ್ನಡ-ಸಂಸ್ಕೃತ ಭಾಷಾ ಪಾಂಡಿತ್ಯ ಮೂಲಕ ದೇವಭಾಷೆಗೆ ಶ್ರೀಮಂತಿಕೆ ತುಂಬಿದವರಾಗಿದ್ದಾರೆ. ಈ ಕಾರಣಕ್ಕಾಗಿ ತಮ್ಮ ನೇತೃತ್ವದ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕೃಷ್ಣ ಭಟ್ಟರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೃಷ್ಣ ಭಟ್ಟರು ಸಾರಸ್ವತ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು. ಇದರ ಜೊತೆಯಲ್ಲಿ ಕೃಷಿ ಕಾಯಕದಲ್ಲೂ ಗಮನಸೆಳೆದವರು ಎಂದು ಬಣ್ಣಿಸಿರುವ ಪ್ರದೀಪ್ ಕುಮಾರ್ ಕಲ್ಕೂರ್, ವೈದ್ದಿಕ ಶಿಕ್ಷಣ ನೀಡುವ ಜೊತೆಗೆ ಆಧುನಿಕ ಕೃಷಿ ಪದ್ದತಿಯನ್ನೂ ಅನೇಕರಿಗೆ ಹೇಳಿಕೊಟ್ಟ ಗುರುಶ್ರೇಷ್ಠರೆನಿಸಿದ್ದಾರೆ ಎಂದು ಸ್ಮರಿಸಿದ್ದಾರೆ.