ಅತ್ಯಾಚಾರ ಆರೋಪ ಸಾಬೀತಾದರೆ ದೇಹತ್ಯಾಗಕ್ಕೂ ಸಿದ್ಧ
ಅತ್ಯಾಚಾರ ಆರೋಪ ಸಾಬೀತಾದರೆ, ರಾಘವೇಶ್ವರ ಶ್ರೀ ಪೀಠ ತ್ಯಾಗ ಅಷ್ಟೇ ಅಲ್ಲ ದೇಹತ್ಯಾಗಕ್ಕೂ ಸಿದ್ಧರಿದ್ದಾರೆ ಎಂದು ಸ್ವಾಮೀಜಿ ಬೆಂಬಲಿಗರು ವಿರೋಧಿಗಳಿಗೆ ಸವಾಲು ಹಾಕಿದ್ದಾರೆ.
ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಕ್ಕೆ ಗುರಿಯಾಗಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಪೀಠ ತ್ಯಾಗಕ್ಕೆ ಸಮಾನ ಮನಸ್ಕ ವೇದಿಕೆ ಒತ್ತಾಯಿಸಿರುವುದಕ್ಕೆ ಪ್ರತಿಯಾಗಿ, ರಾಮಚಂದ್ರಾಪುರ ಮಠದ ಕಾರ್ಯದರ್ಶಿಗಳಾದ ಗಜಾನನ ಶರ್ಮ ಹಾಗೂ ಗೋಪಾಲ ಕೃಷ್ಣ ಹೆಗ್ಡೆ ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಮಠದ ಪರವಾಗಿರುವ ಸಾಕ್ಷಿಗಳನ್ನು ತಿರುಚಿ ಹೊಸ ಸಾಕ್ಷಿಗಳನ್ನು ಸೃಷ್ಟಿಸಲಾಗುತ್ತಿದೆ. ಸಾಕ್ಷಿಗಳನ್ನು ನಾಶಪಡಿಸುವ ಸಲುವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ವೇಳೆ ಒಂದು ರೀತಿಯ ಹೇಳಿಕೆ ನೀಡಿದ್ದ ಎಂ.ಎನ್. ಭಟ್ ಮದ್ಗುಣಿ, ಈಗ ತಮ್ಮ ಹೇಳಿಕೆಗಳನ್ನು ತಿರುಚುತ್ತಿದ್ದಾರೆ. ಸಾಕ್ಷಿಗಳನ್ನು ತಿರುಚಿ ಹೊಸ ಸಾಕ್ಷಿ ಸೃಷ್ಟಿಸಲು ಅವರು ಯತ್ನಿಸುತ್ತಿದ್ದಾರೆ. ಮಠಕ್ಕೆ ಕೆಟ್ಟ ಹೆಸರು ತರುವ ದುರದ್ದೇಶದಿಂದ ಪ್ರಭಾವ ಬೀರಿ ಮಠದ ವಿರುದ್ಧ ಹೇಳಿಕೆ ನೀಡುವಂತೆ ಮಾಡಲಾಗುತ್ತಿದೆ ಎಂದು ಸ್ವಾಮೀಜಿ ಆಪ್ತರು ಹೇಳಿದರು.
ರಾಘವೇಶ್ವರ ಸ್ವಾಮಿ ಯಾರನ್ನೂ ಏಕಾಂತ ಸೇವೆಗೆ ಕರೆಯುತ್ತಿರಲಿಲ್ಲ. ಪ್ರೇಮಲತಾ ಮಠಕ್ಕೆ, ಸ್ವಾಮೀಜಿಯವರಿಗೆ ಕೆಟ್ಟ ಹೆಸರು ತರುವ ದುರದ್ದೇಶದಿಂದ ಈ ರೀತಿ ದೂರು ನೀಡಿದ್ದಾರೆ. ಅಲ್ಲದೆ, ಗಾಯನ ತಂಡದಲ್ಲಿ ಕೇವಲ ಪ್ರೇಮಲತಾ ಒಬ್ಬರೇ ಇರಲಿಲ್ಲ. ಇತರೆ ಹೆಣ್ಣು ಮಕ್ಕಳು ಕೂಡ ಇದ್ದರು. ಆದರೆ, ಪ್ರೇಮಲತಾ ಅವರು ಸ್ವಾಮೀಜಿಯವರ ಬಗ್ಗೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು. ಒಂದು ವೇಳೆ ಆರೋಪ ಸಾಬೀತಾದರೆ ಶ್ರೀಗಳು ಪೀಠ ತ್ಯಾಗವಷ್ಟೇ ಅಲ್ಲ, ದೇಹ ತ್ಯಾಗಕ್ಕೂ ಸಿದ್ಧರಿದ್ದಾರೆ ಎಂದು ಮಠದ ಈ ಪ್ರಮುಖರು ಸ್ಪಷ್ಟಪಡಿಸಿದರು.