NPS ನ ಸುಸ್ಥಿರ ಬೆಳವಣಿಗೆ ಉತ್ತೇಜಿಸಲು PFRDA ನೀತಿ ಸುಧಾರಣೆಗಳ ಅನಾವರಣ
ನವದೆಹಲಿ: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ, ಪರಿಶಿಷ್ಟ ವಾಣಿಜ್ಯ ಬ್ಯಾಂಕುಗಳು (SCBs) ಸ್ವತಂತ್ರವಾಗಿ ಪಿಂಚಣಿ ನಿಧಿಗಳನ್ನು ಸ್ಥಾಪಿಸಲು ಅವಕಾಶ ನೀಡುವ ಹೊಸ ಚೌಕಟ್ಟನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಗುರುವಾರ ಅನಾವರಣಗೊಳಿಸಿದೆ.
ಈ ಕ್ರಮದಿಂದ ಪಿಂಚಣಿ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಲಿದ್ದು, ಚಂದಾದಾರರ ಹಿತಾಸಕ್ತಿಗಳ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇದುವರೆಗೆ ಬ್ಯಾಂಕುಗಳ ಸೀಮಿತ ಭಾಗವಹಿಸುವಿಕೆಗೆ ಕಾರಣವಾಗಿದ್ದ ನಿಯಂತ್ರಣಾತ್ಮಕ ನಿರ್ಬಂಧಗಳನ್ನು ಸರಿಪಡಿಸುವುದೇ ಈ ಚೌಕಟ್ಟಿನ ಉದ್ದೇಶವಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾನದಂಡಗಳಿಗೆ ಅನುಗುಣವಾಗಿ ನಿವ್ವಳ ಮೌಲ್ಯ, ಮಾರುಕಟ್ಟೆ ಬಂಡವಾಳೀಕರಣ ಮತ್ತು ವಿವೇಕಯುತ ಸದೃಢತೆಯ ಆಧಾರದಲ್ಲಿ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗಿದ್ದು, ಉತ್ತಮ ಬಂಡವಾಳ ಹೊಂದಿರುವ ಮತ್ತು ವ್ಯವಸ್ಥಿತವಾಗಿ ಬಲಿಷ್ಠವಾದ ಬ್ಯಾಂಕುಗಳಿಗೆ ಮಾತ್ರ ಪಿಂಚಣಿ ನಿಧಿ ಪ್ರಾಯೋಜನೆಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು; ಅವು ಹೊಸ ಹಾಗೂ ಅಸ್ತಿತ್ವದಲ್ಲಿರುವ ಪಿಂಚಣಿ ನಿಧಿಗಳಿಗೆ ಅನ್ವಯವಾಗಲಿವೆ ಎಂದು PFRDA ಸ್ಪಷ್ಟಪಡಿಸಿದೆ.
ಈ ನಡುವೆ, PFRDA ಆರಂಭಿಸಿದ ಆಯ್ಕೆ ಪ್ರಕ್ರಿಯೆಯನ್ವಯ NPS ಟ್ರಸ್ಟ್ ಮಂಡಳಿಗೆ ಮೂರು ಹೊಸ ಟ್ರಸ್ಟಿಗಳನ್ನು ನೇಮಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ, ಯುಟಿಐ ಎಎಂಸಿ–ಟ್ರಸ್ಟಿಯ ಮಾಜಿ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಸ್ವಾತಿ ಅನಿಲ್ ಕುಲಕರ್ಣಿ ಹಾಗೂ ಡಿಜಿಟಲ್ ಇಂಡಿಯಾ ಫೌಂಡೇಶನ್ನ ಸಹ-ಸಂಸ್ಥಾಪಕ ಹಾಗೂ ಮುಖ್ಯಸ್ಥ ಡಾ. ಅರವಿಂದ್ ಗುಪ್ತಾ ಅವರು ಟ್ರಸ್ಟಿಗಳಾಗಿ ನೇಮಕಗೊಂಡಿದ್ದಾರೆ. ಖಾರಾ ಅವರನ್ನು NPS ಟ್ರಸ್ಟ್ ಮಂಡಳಿಯ ಅಧ್ಯಕ್ಷರನ್ನಾಗಿಯೂ ನೇಮಿಸಲಾಗಿದೆ.
ಇನ್ನು ವಿಕಸನಗೊಳ್ಳುತ್ತಿರುವ ಆರ್ಥಿಕ ಪರಿಸ್ಥಿತಿ, ಸಾರ್ವಜನಿಕರ ಆಕಾಂಕ್ಷೆಗಳು ಹಾಗೂ ಅಂತರರಾಷ್ಟ್ರೀಯ ಮಾನದಂಡಗಳಿಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ, ಪಿಂಚಣಿ ನಿಧಿಗಳ ಹೂಡಿಕೆ ನಿರ್ವಹಣಾ ಶುಲ್ಕ (IMF) ರಚನೆಯನ್ನು PFRDA ಪರಿಷ್ಕರಿಸಿದೆ. ಈ ಹೊಸ IMF ರಚನೆ 2026ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಪರಿಷ್ಕೃತ ಸ್ಲ್ಯಾಬ್ ಆಧಾರಿತ IMF ವ್ಯವಸ್ಥೆಯಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ವಲಯದ ಚಂದಾದಾರರಿಗೆ ವಿಭಿನ್ನ ದರಗಳನ್ನು ನಿಗದಿಪಡಿಸಲಾಗಿದ್ದು, ಬಹು ಯೋಜನೆ ಚೌಕಟ್ಟಿನ (MSF) ಅಡಿಯಲ್ಲಿ ಕಾರ್ಯನಿರ್ವಹಿಸುವ ಯೋಜನೆಗಳಿಗೂ ಇದು ಅನ್ವಯವಾಗಲಿದೆ. MSF ಕಾರ್ಪಸ್ ಅನ್ನು ಪ್ರತ್ಯೇಕವಾಗಿ ಲೆಕ್ಕಹಾಕಲಾಗುತ್ತದೆ ಎಂದು ತಿಳಿಸಲಾಗಿದೆ.
ಈ ನೀತಿ ಸುಧಾರಣೆಗಳಿಂದ NPS ಪರಿಸರ ವ್ಯವಸ್ಥೆ ಇನ್ನಷ್ಟು ಸ್ಪರ್ಧಾತ್ಮಕ, ಪಾರದರ್ಶಕ ಮತ್ತು ಸ್ಥಿತಿಸ್ಥಾಪಕವಾಗಲಿದೆ. ಇದರಿಂದ ದೀರ್ಘಾವಧಿಯಲ್ಲಿ ನಿವೃತ್ತಿ ಫಲಿತಾಂಶಗಳು ಸುಧಾರಿಸುವುದರ ಜೊತೆಗೆ ವೃದ್ಧಾಪ್ಯದ ಆದಾಯ ಭದ್ರತೆಗೂ ಬಲ ಸಿಗಲಿದೆ ಎಂದು PFRDA ವಿಶ್ವಾಸ ವ್ಯಕ್ತಪಡಿಸಿದೆ.
