ರೈತ ಜಾಗೃತಿಗೆ ಮುನ್ನುಡಿ; ದೆಹಲಿಯಲ್ಲಿ ಅನ್ನದಾತರ ಚಿಂತನ-ಮಂಥನ
ನವದೆಹಲಿ: ರೈತರ ಸಮಸ್ಯೆಗಳ ಬಗ್ಗೆ ಕೇಂದ್ರದ ಗಮನಸೆಳೆಯಲು ಹಾಗೂ ರೈತಪರ ಕ್ರಮಗಳ ಜಾರಿಗೆ ಒತ್ತಾಯಿಸಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸಮಾವೇಶ ಗಮನಸೆಳೆದಿದೆ. ನವಂಬರ್ 7 ರವರೆಗೆ ನಡೆಯುವ ಈ ಸಮಾವೇಶದಲ್ಲಿ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸೇರಿದಂತೆ ಕರ್ನಾಟಕದಿಂದಲೂ ರೈತ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದಾರೆ.
ದೇಶಾದ್ಯಂತ ಇರುವ ರಾಜಕೀಯೇತರ ರೈತ ಸಂಘಟನೆಗಳ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದು, ಕರ್ನಾಟಕದಿಂದ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ರೈತರತ್ನ ಕುರುಬೂರು ಶಾಂತಕುಮಾರ್, ಧರ್ಮರಾಜ್, ದೇವನೂರು ನಾಗೇಂದ್ರಸ್ವಾಮಿ.
ಚುಂಚರಾಯನಹುಂಡಿ ಗಿರಿ, ಮಹದೇವಸ್ವಾಮಿ ಭಾಗವಹಿಸಿದ್ದಾರೆ. ಪಂಜಾಬ್ ಜಗಜಿತ್ ಸಿಂಗ್ ದಲೈವಾಲಾ, ಮಧ್ಯ ಪ್ರದೇಶದ ಶಿವಕುಮಾರ್ ಕಕ್ಕ, ಹರಿಯಾಣದ ಅಭಿಮನ್ಯುಕೊಹರ್, ಕೇರಳ ಕೆ ವಿ ಬಿಜು, ಉತ್ತರ ಪ್ರದೇಶ್ ಒರಿಸ್ಸಾ ಹಿಮಾಚಲ ಪ್ರದೇಶ ಮಹಾರಾಷ್ಟ್ರ ಬಿಹಾರ್ ಮುಂತಾದ ರಾಜ್ಯಗಳ ರೈತ
ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ದೇಶದ ರೈತ ಮುಖಂಡರ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಭೆ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಕುರುಬೂರು ಶಾಂತಕುಮಾರ್, 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಒಮ್ಮೆ ರೈತರ ಸಾಲ ಮನ್ನಾ ಮಾಡುವ ಪಕ್ಷವನ್ನು ಬೆಂಬಲಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ, ಕಾನೂನು ಜಾರಿ ಮಾಡುವವರಿಗೆ ಬೆಂಬಲ ನೀಡುವ ಬಗ್ಗೆ, ಎಲ್ಲಾ ಕೃಷಿ ಉತ್ಪನ್ನಗಳಿಗೆ ಕಡ್ಡಾಯವಾಗಿ ಬೆಳೆ ವಿಮೆಯನ್ನು ಜಾರಿಗೊಳಿಸುವ ಪಕ್ಷಕ್ಕೆ ರೈತರ ಬೆಂಬಲದ ಬಗ್ಗೆ, 60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ 5000 ಪಿಂಚಣಿ ನೀಡುವವರಿಗೆ ಬೆಂಬಲ ಬಗ್ಗೆ, ಕೃಷಿ ಪಂಪ್‌ಸೇಟ್‌ಗಳ ವಿದ್ಯುತ್ ಖಾಸಗಿಕರಣ ನೀತಿಯನ್ನು ಕೈ ಬಿಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಬಗ್ಗೆ ನಿರ್ಣಯ ಅಂಗೀಕರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿ ದೇಶಾದ್ಯಂತ ರೈತರನ್ನು ಜಾಗೃತಿ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಗುವುದು.