ನ್ಯಾಷನಲ್ ಲಾ ಸ್ಕೂಲ್ ಅವಾಂತರ; ಕರ್ನಾಟಕದ ವಿದ್ಯಾರ್ಥಿಗಳಿಗಿರುವ ಶೇ.25 ಸೀಟುಗಳನ್ನು ತಪ್ಪಿಸಲು ವ್ಯವಸ್ಥಿತ ಪ್ರಯತ್ನ

0

ಬೆಂಗಳೂರು: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವೆರ್ಸಿಟಿ ಕುಲಪತಿಗಳು ಬೆಂಗಳೂರಿನ ನಾಗರಬಾವಿಯಲ್ಲಿರುವ ವಿಶ್ವವಿದ್ಯಾಲಯದಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇಕಡಾ 25 ರಷ್ಟು ನೀಡಬೇಕಾದ ಸೀಟುಗಳನ್ನು ತಪ್ಪಿಸಲು ವ್ಯವಸ್ಥಿತವಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ‘ನ್ಯಾಯಮಿತ್ರ’ ಅಧ್ಯಕ್ಷರೂ ಆದ ಹಿರಿಯ ವಕೀಲ ರಮೇಶ್ ಬಾಬು ಆರೋಪಿಸಿದ್ದಾರೆ‌.

ಮಾಜಿ ಶಾಸಕರೂ, ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರೂ ಆಗಿರುವ ರಮೇಶ್ ಬಾಬು ಅವರು ಈ ಕುರಿತಂತೆ ಮಾಧ್ಯಮ ಹೇಳಿಕೆ ನೀಡಿ, ಕರ್ನಾಟಕದ ಬಿಜೆಪಿ ಸರ್ಕಾರ ವಿಶ್ವ ವಿದ್ಯಾಲಯಕ್ಕೆ ಪತ್ರ ಬರೆದು ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಆಕ್ಟ್ 1986 ರ ಪ್ರಕಾರ ಈ ವಿಶ್ವವಿದ್ಯಾಲಯಕ್ಕೆ ಬೆಂಗಳೂರಿನಲ್ಲಿ 23 ಎಕರೆ ನೆಲದ ಸಮೇತ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡಿರುತ್ತದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಈ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದು, ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷರು ಸಾಮಾನ್ಯ ಮಂಡಳಿಯ ಚೇರ್ಮೆನ್ ಆಗಿರುತ್ತಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನ್ಯಾಯಾಂಗದ, ರಾಜ್ಯ ಸರ್ಕಾರದ ಮತ್ತು ಕಾನೂನು ವಿಭಾಗದ ಅನುಭವಿಗಳ ಮಂಡಳಿಯನ್ನು ಹೊಂದಿರುತ್ತದೆ. ಇಂತಹ ಆಡಳಿತ ಮಂಡಳಿ ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ನೀಡದೆ ಮೋಸ ಎಸಗುತ್ತಿದೆ ಎಂದು ರಮೇಶ್ ಬಾಬು ದೂರಿದ್ದಾರೆ.

ಕುಲಪತಿಗಳು ವಿಶ್ವವಿದ್ಯಾಲಯದಲ್ಲಿ ವಿಭಾಗಗೊಳಿಸಲಾದ ಅಡ್ಡ ಮೀಸಲಾತಿಯನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ಅಳವಡಿಸಿರುವುದಾಗಿ ಹೇಳುತ್ತಿದ್ದಾರೆ. ಅಂದರೆ ದೇಶದ ಯಾವುದೇ ವಿಶ್ವವಿದ್ಯಾಲಯದಲ್ಲಿ ಇಲ್ಲದ ಅಡ್ಡ ಮೀಸಲಾತಿಯ ಹೊಸ ನಿಯಮವನ್ನು ರೂಪಿಸಿ ರಾಜ್ಯದ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ವಂಚನೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರವು ಈ ವಿಶ್ವ ವಿದ್ಯಾಲಯದ ಉಪಕುಲಪತಿಗಳ ತಂತ್ರಗಾರಿಕೆಯನ್ನು ಬೆತ್ತಲುಗೊಳಿಸಿ ರಾಜ್ಯದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಯಬೇಕಾಗಿರುತ್ತದೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶದಲ್ಲಿ ಶೇಕಡಾ 25ರಷ್ಟು ಸೀಟುಗಳನ್ನು ನೀಡದೆ ಹೋದರೆ ಈ ವಿಶ್ವವಿದ್ಯಾಲಯವನ್ನು ಕರ್ನಾಟಕದಿಂದ ಹೊರದಬ್ಬುವ ತೀರ್ಮಾನವನ್ನು ರಾಜ್ಯಸರ್ಕಾರ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಕರ್ನಾಟಕದ ಹಿತಾಸಕ್ತಿ ಮತ್ತು ಇಲ್ಲಿನ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಣೆ ಮಾಡುವುದು ಕರ್ನಾಟಕ ಸರ್ಕಾರದ ಆದ್ಯತೆ ಆಗಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You may have missed