ಕರಾವಳಿಯಲ್ಲಿ ನಾಗಾರಾಧನೆಗೆ ಮಹತ್ವ ಯಾಕೆ ಗೊತ್ತಾ ?
ತುಳುನಾಡು, ರಾಜ್ಯ ಕರಾವಳಿ ಜಿಲ್ಲೆಗಳಲ್ಲಿ ನಾಗರಾಧನೆಗೆ ಮಹತ್ವವಿದೆ. ತುಳು ನಾಡು ಪರಶುರಾಮನ ಸೃಷ್ಟಿಯ ನಾಡು. ಮಹಾ ಮುನಿ ಪರಶುರಾಮನ ಕೊಡಲಿಗೆ ಬೆದರಿ ಕಡಲು ಹಿಂದೆ ಸರಿದ ಭಾಗ. ಕಡಲು ಹಿಂದೆ ಸರಿದ ಕರಣ ಆ ಭಾಗದಲ್ಲಿ ಹಾವುಗಳಿಗೆ ನೆಲೆ ಇಲ್ಲದಂತಾಯಿತಂತೆ. ಈ ಸಂದರ್ಭದಲ್ಲಿ ಆ ನಾಗ ಸಂತತಿಗೆ ಪರಶುರಾಮರು ದೈವತ್ವದ ಸ್ಥಾನ ಕರುಣಿಸಿದರು.
ಆ ಭಾಗದ ಜನ ಆ ನಾಗಗಳಿಗೆ ಪೂಜೆ ಸಲ್ಲಿಸಿದರೆ, ಆ ಮಹಿಮೆಯ ಮೂಲಕವೇ ನಾಗ ಸಂತತಿಗೆ ದೈವವಾಗಿ ನೆಲೆಯಾಗುತ್ತದೆ ಎಂದು ಪರಶುರಾಮ ಅಭಯ ಕೊಟ್ಟರೆಂಬ ಪುರಾಣ ಕಥೆ ಇದೆ. ಅದು ನಂಬಿಕೆಯಾಗಿ ಜನರ ಮನದಲ್ಲಿ ಉಳಿದಿದೆ. ಹಾಗಾಗಿ ನಾಗರಾಧನೆಗೆ ದಕ್ಷಿಣಕನ್ನಡ, ಉಡುಪಿ, ಜನ ಹೆಚ್ಚಿನ ಮಹತ್ವ ನೀಡುತ್ತಾರೆ. ದಕ್ಷಿಣಕನ್ನಡ, ಉಡುಪಿಯ ಎಲ್ಲೆಂದರಲ್ಲಿ ನಾಗ ಬಣಗಳು ಸಹಜ. ಪ್ರತಿ ಕುಟುಂಬಕ್ಕೊಂದರಂತೆ ನಾಗಬಣಗಳು ಇದ್ದು, ನಾಗರ ಪಂಚಮಿ ಸಂದರ್ಭದಲ್ಲಿ ಅಲ್ಲಿರುವ ಕಲ್ಲು ವಿಗ್ರಹಗಳಿಗೆ ಮಾಡುವ ಅಭಿಷೇಕದ ಹಾಲು ಭೂಮಿಗೆ ಇಂಗುತ್ತದೆ. ಇಲ್ಲವೇ ಆ ಸಂದರ್ಭದಲ್ಲಿ ಮಳೆಯಾದರೆ, ನೀರಿನ ಮೂಲಕ ಹಾಲು ಸಮುದ್ರ ಸೇರುತ್ತದೆ. ಇದರಿಂದ ಒಳಿತಾಗುತ್ತದೆ ಎಂಬುದು ಜನರ ನಂಬಿಕೆ.
ಮಂಗಳೂರು, ಉಡುಪಿ, ಉತ್ತರ ಕನ್ನಡ ಸೇರಿದಂತೆ ನಾಗರಾಧನೆಗೆ ಮಹತ್ವವಿರುವ ಕಡೆ ನಾಗರ ಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕುಕ್ಕೆ ಸುಬ್ರಹ್ಮಣ್ಯ, ಶರವು ಗಣಪತಿ, ಕದ್ರಿ ಮಂಜುನಾಥ, ಕುಡುಪು ಅನಂತಪದ್ಮನಾಭ, ಪುತ್ತೂರು ಮಹಾಲಿಂಗೇಶ್ವರ, ಮಂಜೇಶ್ವರ ಅನಂತೇಶ್ವರ ದೇಗುಲಗಳಲ್ಲಿ ನಾಗರ ಪಂಚಮಿ ಪೂಜೆ ಕೈಂಕರ್ಯಗಳಲ್ಲಿ ಭಕ್ತ ಸಮೂಹ ತಲ್ಲಿಣವಾಗಿತ್ತು.