ಮೈಸೂರು ಅರಮನೆಯಲ್ಲಿ ವಿವಾಹ ಸಿದ್ದತ ಸಂಭ್ರಮ
ಜಗತ್ಪ್ರಸಿದ್ದ ಮೈಸೂರು ಅರಮನೆಯಲ್ಲಿ ಸಂಭ್ರಮ ಸಡಗರ ಮನೆಮಾಡಿದೆ. ರಾಜವಂಶಸ್ಥ ಯದುವಂಶದ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿವಾಹ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಅರಮನೆ ಮದುವಣಗಿತ್ತಿಯಂತೆ ಸಿದ್ದಗೊಳ್ಳುತ್ತಿದೆ.
ದೇಶದ ಪ್ರತಿಷ್ಟಿತ ರಾಜಮನೆತನಗಳಲ್ಲಿ ಒಂದಾಗಿರುವ ಮೈಸೂರಿನ ಯದುವಂಶದ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿವಾಹ ಮಹೋತ್ಸವ ಜೂನ್ 27ರಂದು ರಾಜಸ್ಥಾನದ ಡುಂಗರ್ ಪುರ ರಾಜಮನೆತನದ ಯುವರಾಣಿ ತ್ರಿಶಿಕಾ ಕುಮಾರಿ ಸಿಂಗ್ ಅವರೊಂದಿಗೆ ನೆರವೇರಲಿದೆ. ಅಂಬಾವಿಲಾಸ ಅರಮನೆ ಆವರಣದಲ್ಲಿ ಸಿದ್ದತೆಗಳು ಬಿರುಸಿನಿಂದ ಸಾಗಿವೆ. ಒಂದು ವಾರದವರೆಗೆ ವಿವಾಹ ಮಹೋತ್ಸವದ ವಿಧಿಗಳು ನೆರವೇರಲಿದೆ. ಜೂನ್ 24ರ ಶುಕ್ರವಾರ ಸಂಜೆಯೇ ದೇವರು ತರುವ ಮೂಲಕ ರಾಜಮನೆತನದ ವಿವಾಹ ಸಮಾರಂಭಕ್ಕೆ ಚಾಲನೆ ಸಿಗಲಿದೆ. ಜೂನ್ 25 ಹಾಗೂ 26 ರಂದು ಮದುವೆಗೆ ಸಂಬಂಧಿಸಿದ ದೇವರ ಪೂಜೆಗಳು ನೆರವೇರಲಿವೆ. ಜೂನ್ 27 ರಂದು ಮಧ್ಯಾಹ್ನ ಯದುವೀರ್-ತ್ರಿಶಿಕಾ ಕುಮಾರಿ ವಿವಾಹ ನೆರವೇರಲಿದೆ.
ಇನ್ನು ಜೂನ್ 28ರಂದು ಮದುವೆಯ ಆರತಾಕ್ಷತೆ ಸಮಾರಂಭ ನಡೆಯಿಲಿದ್ದು, ಜೂನ್ 29ರಂದು ವಿವಾಹಕ್ಕೆ ಸಂಬಂಧಿಸಿದ ಪೂಜಾ ಕೈಂಕರ್ಯ ನೆರವೇರಿಸುವುದರೊಂದಿಗೆ ಮದುವೆ ಸಮಾರಂಭಕ್ಕೆ ತೆರೆ ಬೀಳಲಿದೆ. ಮೈಸೂರು ರಾಜಮನೆತನದ ಮದುವೆಗಾಗಿ ಕಳೆದ 2 ತಿಂಗಳಿಂದ ಸಿದ್ದತೆಗಳು ನಡೆಯುತ್ತಿದ್ದು, ಮದುವೆ ದಿನಾಂಕ ಹತ್ತಿರ ಬರುತ್ತಿರುವುದರಿಂದ ಅರಮನೆಯ ಆವರಣ ಕೇಂದ್ರಬಿಂದುವಾಗಿದೆ.
ಮಳೆಗಾಲದ ಸಂದರ್ಭದಲ್ಲಿ ಮದುವೆ ನಡೆಯುತ್ತಿರುವುದರಿಂದ ರಾಜಮನೆತನದ ಖಾಸಗಿ ನಿವಾಸಕ್ಕೆ ಹೊಂದಿಕೊಂಡಂತೆ ವಾಟರ್ ಫ್ರೂಫ್ ಪೆಂಡಾಲ್ ಹಾಕಲಾಗುತ್ತಿದೆ. ಅರಮನೆಯ ಮುಂಭಾಗದಲ್ಲಿ ಮದುವೆಯ ಹಸಿರು ಚಪ್ಪರ ಹಾಕಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಮದುವೆಗೆ ಆಗಮಿಸುವ ಗಣ್ಯರಿಗೆ ಸುಗ್ರಾಸ ಭೋಜನ ಉಣಬಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಒಟ್ಟಾರೆ ಹಲವಾರು ವರ್ಷಗಳ ಬಳಿಕ ಅಂಬಾವಿಲಾಸ ಅರಮನೆಯಲ್ಲಿ ರಾಜಪರಿವಾರದ ಮದುವೆ ಸಮಾರಂಭ ನಡೆಯುತ್ತಿದ್ದು, ಅರಮನೆ ಆವರಣ ದಿನೇ ದಿನೇ ಅಣಿಗೊಳ್ಳುತ್ತಿದೆ…