ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು BJP-JDS ನಾಯಕರಿಂದ ‘ಮೈಸೂರು ಪಾದಯಾತ್ರೆ?
ಬೆಂಗಳೂರು: “ಬಿಜೆಪಿ ಮತ್ತು ಜೆಡಿಎಸ್ ಪ್ರಮುಖ ನಾಯಕರು ತಮ್ಮ ಮಕ್ಕಳನ್ನು ರಾಜಕೀಯವಾಗಿ ಉಳಿಸಲು ಬಹುಮತದಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರ ಉರುಳಿಸಲು ಪಿತೂರಿ ನಡೆಸುತ್ತಿದ್ದಾರೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ವ್ಯಾಖ್ಯಾನಿಸಿದ್ದಾರೆ..
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಚಿವರೊಂದಿಗೆ ಭಾನುವಾರ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ಪ್ರಜ್ವಲ್ ರೇವಣ್ಣ ಪ್ರಕರಣ ಹಾಗೂ ಹಲವಾರು ಪ್ರಕರಣಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಪಿತೂರಿಯನ್ನು ದೇಶದ ಜನ ಗಮನಿಸಿದ್ದಾರೆ. ನಾವು ಜನರಿಗೆ ವಾಸ್ತವಾಂಶ ವಿವರಿಸುತ್ತೇವೆ. ಒಗ್ಗಟ್ಟಿನಿಂದ ಹೋರಾಡುತ್ತೇವೆ” ಎಂದರು.
“ಈ ಹಿಂದೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿದ್ದ ಬಿಜೆಪಿ ಈಗಲೂ ಅದೇ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡಿದೆ. ಈ ಎಲ್ಲಾ ಬೆಳವಣಿಗೆಗಳ ಕುರಿತು ರಾಜ್ಯದ ಸಚಿವರೊಂದಿಗೆ ಚರ್ಚಿಸಲಾಗಿದೆ” ಎಂದು ಹೇಳಿದರು. ‘2023ರ ವಿಧಾನಸಭೆ ಚುನಾವಣೆ ಉಳ್ಳವರ ಮತ್ತು ಇಲ್ಲದವರು ನಡುವಿನ ಹೋರಾಟವಾಗಿತ್ತು. ಈ ಹೋರಾಟದಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದು. ಬಹುಮತ ಪಡೆದು ಸರ್ಕಾರ ರಚಿಸಿದೆ. ಬಹುಮತ ಪಡೆದ ಸರ್ಕಾರವನ್ನೇ ಬೀಳಿಸಲು ಕುತಂತ್ರದಿಂದ ಹೊರಟಿದ್ದಾರೆ’ ಎಂದುವೇಣುಗೋಪಾಲ್ ಕಿಡಿಕಾರಿದರು.
“ಸಿದ್ದರಾಮಯ್ಯ ಅವರ ಪ್ರಾಮಾಣಿಕತೆಯ ಬಗ್ಗೆ ಇಡೀ ರಾಜ್ಯದ ಜನರಿಗೆ ತಿಳಿದಿದೆ. ಅವರು ಸಿಎಂ ಸ್ಥಾನಕ್ಕೆ ಹೊಸಬರೇನಲ್ಲ. ಅವರ ರಾಜಕೀಯ ಪ್ರಯಾಣದ ಬಗ್ಗೆ ರಾಜ್ಯದ ಪ್ರತಿಯೊಬ್ಬರು ತಿಳಿದಿದ್ದಾರೆ. ಅವರ ಆರಂಭದ ದಿನಗಳು ಹಾಗೂ ಈಗ ಅವರ ಬೆಳವಣಿಗೆಯನ್ನು ನೋಡಿದ್ದಾರೆ” ಎಂದರು.
“ನಮ್ಮ ಸರ್ಕಾರ ಬಡವರಿಗಾಗಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಹೊಡೆತ ಬಿದ್ದಿದೆ. ಅಲ್ಲದೇ ಕಾಂಗ್ರೆಸ್ ಸರ್ಕಾರ ಅನೇಕ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ತನಿಖೆಗೆ ಆದೇಶಿಸಿದೆ. ಇದರಲ್ಲಿ ಸಿಕ್ಕಿಹಾಕಿಕೊಳ್ಳುವ ಭಯದಿಂದಾಗಿ ಮುಖ್ಯಮಂತ್ರಿಯವರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ” ಎಂದರು.
“ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡಿರುವ ತಾರತಮ್ಯ ಕುರಿತು ಯಾರೂ ಮಾತನಾಡುತ್ತಿಲ್ಲ. ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ಆಯ್ಕೆಯಾಗಿದ್ದರೂ ಯಾವುದೇ ನೆರವು ಒದಗಿಸಿಲ್ಲ. ಕೇಂದ್ರ ಸರ್ಕಾರ ಅನುದಾನ ನೀಡುವ ಬದಲಿಗೆ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ. ನಾವು ಒಗ್ಗಟ್ಟಾಗಿ ಇದ್ದೇವೆ, ಪಿತೂರಿ ವಿರುದ್ಧ ಹೋರಾಡುತ್ತೇವೆ” ಎಂದರು.
“ರಾಜ್ಯಪಾಲರನ್ನು ಬಿಜೆಪಿ ಪಿತೂರಿಯ ಭಾಗವಾಗಿ ಬಳಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಯವರಿಗೆ ಕಾರಣ ಕೇಳಿ ನೋಟಿಸ್ ನೀಡುವ ಮೂಲಕ ಸರ್ಕಾರ ಬಿಳಲಿದೆ ಎನ್ನುವ ಭಾವನೆ ಮೂಡಿಸುತ್ತಿದ್ದಾರೆ. ನಮ್ಮ ಮತದಾರರಿಗೆ ಸತ್ಯಂಶ ತಿಳಿಸುತ್ತೇವೆ. ಸಚಿವರು, ಶಾಸಕರು ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಜನರಿಗೆ ಸರ್ಕಾರದ ಸಾಧನೆಗಳನ್ನು ವಿವರಿಸಿ ಬಿಜೆಪಿ-ಜೆಡಿಎಸ್ ನ ಹುನ್ನಾರವನ್ನು ಬಯಲಿಗೆಳೆಯುವ ಕೆಲಸವನ್ನು ಮಾಡಲಾಗುತ್ತದೆ” ಎಂದರು. ‘ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ವಿಜಯೇಂದ್ರ, ಪ್ರಜ್ವಲ್ ರೇವಣ್ಣ ವಿರುದ್ಧ ಅನೇಕ ಆರೋಪಗಳಿವೆ. ಭ್ರಷ್ಟರು ರಾಜ್ಯದ ಮುಖ್ಯಮಂತ್ರಿ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಹೇಳಿದರು.
“‘ಪ್ರತಿದಿನ ಸಿದ್ದರಾಮಯ್ಯ ಅವರ ವಿರುದ್ಧ ಪದೇ ಪದೇ ಭ್ರಷ್ಟಾಚಾರ ಆರೋಪ ಮಾಡುವ ಮೂಲಕ ಜನಪ್ರಿಯ ಯೋಜನೆಗಳು ಹಾಗೂ ಗ್ಯಾರಂಟಿ ಯೋಜನೆಗಳನ್ನು ಮುಗಿಸುವ ಹುನ್ನಾರ ಬಿಜೆಪಿಯದ್ದು. ಪ್ರತಿಪಕ್ಷಗಳು ಕೇವಲ ಸಿದ್ದರಾಮಯ್ಯನವರನ್ನು ಮಾತ್ರ ಗುರಿಯಾಗಿಸಿಕೊಂಡಿಲ್ಲ. ಕಾಂಗ್ರೆಸ್ ಸರ್ಕಾರದ ಎಲ್ಲರನ್ನು ಹಾಗೂ ಜನಪ್ರಿಯ ಯೋಜನೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ’ ಎಂದರು.