ಹಿಂದೂತ್ವ ಮೂಲಕ ಅಧಿಕಾರಕ್ಕೆ ಬಂದರೂ ಹಿಂದೂಗಳ ಬಗ್ಗೆ ನಿರ್ಲಕ್ಷ್ಯ; ಸುನೀಲ್ ಕುಮಾರ್ ಬಗ್ಗೆ ಆಕ್ರೋಶ
ಉಡುಪಿ: ಸಚಿವ ಸುನೀಲ್ ಕುಮಾರ್ ಅವರನ್ನು ಹಿಂದೂ ಸಂಘಟನೆ ಧೂಷಿಸಿದೆ. ಹಿಂದೂತ್ವ ಮೂಲಕ ಅಧಿಕಾರಕ್ಕೆ ಬಂದರೂ ಹಿಂದೂಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಹಿಂದೂ ಮುಖಂಡರಿಗಿರುವ ಆಕ್ರೋಶ ಅನಾವರಣವಾಗಿದೆ. ಕಾರ್ಕಳ ಶಾಸಕರೂ ಆಗಿರುವ ಸುನೀಲ್ ಕುಮಾರ್ ಅವರನ್ನು ಕ್ಷೇತ್ರತ್ಯಾಗ ಮಾಡುವಂತೆ ಹಿಂದೂ ಮುಖಂಡ ಕರೆ ನೀಡಿದ ವೈಖರಿ ಕರಾವಳಿಯಲ್ಲಿ ಸಂಚನಲನಕ್ಕೆ ಕಾರಣವಾಗಿದೆ.
ಕಾರ್ಕಳದಲ್ಲಿ ಮಾತನಾಡಿರುವ ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್, ಹಿಂದೂತ್ವ ಮೂಲಕ ಅಧಿಕಾರಕ್ಕೆ ಬಂದರೂ ಹಿಂದೂಗಳ ಬಗ್ಗೆ ಕಾಳಜಿ ವಹಿಸದ ನಾಯಕರ ವಿರುದ್ದ ಹರಿಹಾಯ್ದಿದ್ದಾರೆ. ಅದರಲ್ಲೂ ಕಾರ್ಕಳ ಶಾಸಕ ಸುನೀಲ್ ಕುಮಾರ್ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಹಿಂದೂತ್ವ ಏನು ಅಂತ ಗೊತ್ತಾಗಿದೆ. ಈ ಬಾರಿ ನೀವು ಕ್ಷೇತ್ರ ತ್ಯಾಗ ಮಾಡಲೇಬೇಕು ಎಂದು ಮುತಾಲಿಕ್ ಅವರು ಸುನೀಲ್ ಕುಮಾರ್‌ಗೆ ಸಂದೇಶವನ್ನು ನೀಡಿದ ವೈಖರಿ ಅಚ್ಚರಿಗೆ ಕಾರಣವಾಗಿದೆ. ‘ತನ್ನನ್ನು ಬೆಳೆಸಿದ ಗುರುಗಳು ಬಂದಿದ್ದಾರೆ ಎಂದು ತಿಳಿದು ನಿಮ್ಮ ಕ್ಷೇತ್ರವನ್ನು ಬಿಟ್ಟುಕೊಡಿ. ಬೇರೆ ಎಲ್ಲಾದರೂ ಸ್ಪರ್ಧಿಸಿ’ ಎಂದೂ ಸವಾಲು ಹಾಕಿದ್ದಾರೆ.
ನಿಮ್ಮಲ್ಲಿ ನಿಜವಾಗಿ ಹಿಂದುತ್ವ ಇದೆಯೇ? ಆರೆಸ್ಸೆಸ್ ನಿಷ್ಠೆ ಇದೆಯೇ ಎಂದು ಸಚಿವ ಸುನಿಲ್ ಅವರನ್ನು ಪ್ರಶ್ನಿಸಿರುವ ಮುತಾಲಿಕ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಖರ ಹಿಂದೂ ನಾಯಕ ಸ್ಪರ್ಧೆ ಮಾಡಲಿದ್ದಾರೆ ಎಂದು ಸಾರಿದ್ದಾರೆ. ತಾವೇ ಸ್ಪರ್ಧಿಸುವ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಈ ವರೆಗಿನ ನಿಮ್ಮ ಸಾಧನೆ ಮತ್ತು ಗಳಿಕೆ ಸಾಕು ಎಂದು ಸುನಿಲ್ ಕುಮಾರ್ ಅವರ ಬಗ್ಗೆ ವಾಗ್ದಾಳಿ ನಡೆಸಿದ ಮುತಾಲಿಕ್, ತಾತ ಮುತ್ತಾತನಿಂದ ಮರಿ ಮೊಮ್ಮಗನ ತನಕ ಗಳಿಸಿದ್ದು ಸಾಕು ಎಂದ ವಾಕ್ ವೈಖರಿ ಕೂಡಾ ಅಚ್ಚರಿಗೆ ಕಾರಣವಾಯಿತು.