ತಾವೇ ನೇಮಿಸಲ್ಪಡುವ ಅಧಿಕಾರಿಗಳಿಂದಲೇ ನಡೆಸಲ್ಪಡುವ ತನಿಖೆಯಲ್ಲಿ ಮುಖ್ಯಮಂತ್ರಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವೇ?

0
BY Vijayendra

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಅಕ್ರಮ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ನೀಡಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಲೋಕಾಯುಕ್ತ ಮುಖ್ಯಮಂತ್ರಿಗಳಿಗೆ ನೀಡಿರುವ ಕ್ಲೀನ್ ಚಿಟ್ ನಿರೀಕ್ಷಿತವೇ ಆಗಿತ್ತು. ತಾವೇ ನೇಮಿಸಲ್ಪಡುವ ಅಧಿಕಾರಿಗಳಿಂದಲೇ ನಡೆಸಲ್ಪಡುವ ತನಿಖೆಯಲ್ಲಿ ಮುಖ್ಯಮಂತ್ರಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವೇ? ಎಂದವರು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ‘X’ನಲ್ಲಿ ಪ್ರತಿಕ್ರಿಯೆ ಹಂಚಿಕೊಂಡಿರುವ ವಿಜಯೇಂದ್ರ, ‘ನಾವು ಮೊದಲಿನಿಂದಲೂ ಸಿಬಿಐ ತನಿಖೆಗಾಗಿ ಒತ್ತಾಯಿಸುತ್ತಿದ್ದೆವು, ಸಿಬಿಐ ತನಿಖೆಯಿಂದ ಮಾತ್ರ ಸಾವಿರಾರು ನಿವೇಶನಗಳು ಲೂಟಿಯಾಗಿರುವ ಮುಡಾ ಹಗರಣದಲ್ಲಿ ನ್ಯಾಯ ಸಿಗಲು ಸಾಧ್ಯ’ ಎಂದಿದ್ದಾರೆ.

ಸಿದ್ದರಾಮಯ್ಯನವರ 14 ನಿವೇಶನಗಳು, ಲೂಟಿಯಾಗಿರುವ ಸಾವಿರಾರು ನಿವೇಶನಗಳನ್ನು ಹಾಗೂ ಲೂಟಿ ಮಾಡಿದ ಭ್ರಷ್ಟ ಅಧಿಕಾರಿಗಳು ಹಾಗೂ ಪ್ರಭಾವಿಗಳನ್ನು ರಕ್ಷಿಸುತ್ತಿದೆ. ರಾಜ್ಯ ಕಂಡು ಕೇಳರಿಯದ ಬಹುದೊಡ್ಡ ಭ್ರಷ್ಟ ಹಗರಣದ ಪಾರದರ್ಶಕ ತನಿಖೆ ನಡೆಯಬೇಕೆಂದರೆ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರ್ಕಾರದಿಂದ ಅಂತರ ಕಾಯ್ದುಕೊಂಡ ತನಿಖಾ ಸಂಸ್ಥೆಯಿಂದ ಮಾತ್ರ ಸಾಧ್ಯ ಎಂಬುದು ನ್ಯಾಯ ನಿರೀಕ್ಷಿಸುವ ಪ್ರತಿಯೊಬ್ಬರೂ ಒಪ್ಪುವ ಮಾತು. ಈಗಲೂ BJP ತನ್ನ ನಿಲುವನ್ನು ಬದಲಿಸುವ ಪ್ರಶ್ನೆಯೇ ಇಲ್ಲ, ಮುಡಾ ಹಗರಣದ ತನಿಖೆ ಸಿಬಿಐನಿಂದ ನಡೆಯಬೇಕೆಂಬುದೇ ನಮ್ಮ ಒತ್ತಾಯವಾಗಿದೆ’ ಎಂದಿದ್ದಾರೆ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ A1 ಆರೋಪಿ ಸ್ಥಾನದಲ್ಲಿ ಮುಖ್ಯಮಂತ್ರಿಯೊಬ್ಬರು ತನಿಖೆ ಎದುರಿಸಿದ ಪ್ರಥಮ ಪ್ರಕರಣ ಇದಾಗಿದೆ, ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಲೋಕಾಯುಕ್ತ ನೀಡಿರುವ ಕ್ಲೀನ್ ಚಿಟ್ ದುರದೃಷ್ಟಕರ ಎಂದು ಬಣ್ಣಿಸಿರುವ ವಿಜಯೇಂದ್ರ, ಶುದ್ಧ ವ್ಯಕ್ತಿತ್ವ ನಮ್ಮದು ಎಂದು ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯ ನವರು ನೈತಿಕವಾಗಿ ಸೋತು ಬಹುದಿನಗಳಾಗಿವೆ, ಭಂಡತನ ಅವರ ಬಂಡವಾಳವಾಗಿದೆ. ಈ ನೆಲದ ಕಾನೂನಿನ ಮೇಲೆ ನಮಗೆ ವಿಶ್ವಾಸವಿದೆ, ಅಕ್ರಮ, ಭ್ರಷ್ಟಾಚಾರಗಳಿಗೆ ಕುಣಿಕೆ ಬಿಗಿಯುವುದು ಖಚಿತ,ಸತ್ಯ ಗೆಲ್ಲುವುದು ನಿಶ್ಚಿತ ಎಂದಿದ್ದಾರೆ.

Leave a Reply

Your email address will not be published. Required fields are marked *

You may have missed