ಮೂಡಾ ಹಗರಣದಲ್ಲಿ ಸಿದ್ದರಾಮಯ್ಯ ಜೈಲು ಸೇರೋದು ಖಚಿತ: ಛಲವಾದಿ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ನಿವೇಶನ ಹಂಚಿಕೆ ಅಕ್ರಮ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೈಲಿಗೆ ಹೋಗುವುದು ಖಚಿತ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬಿಜೆಪಿ ರಾಜ್ಯ ಕಚೇರಿ ‘ಜಗನ್ನಾಥ ಭವನ’ದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, “ಸಿಎಂ ಅವರ ಮನಸ್ಥಿತಿ ಇನ್ನೂ ಬದಲಾಗಿಲ್ಲ, ಮತ್ತು MUDA ಸಮಸ್ಯೆ ಅವರನ್ನು ಕಾಡುತ್ತಲೇ ಇದೆ. ಈ ವಿಷಯ ಇಲ್ಲಿಗೆ ಮುಗಿಯುವುದಿಲ್ಲ. ನೀವು ಯಾರಿಂದ ಬೇಕಾದರೂ ಪ್ರಮಾಣಪತ್ರ ಪಡೆಯಬಹುದು, ಆದರೆ ಈ ದೇಶದ ಕಾನೂನು ಇನ್ನೂ ಜೀವಂತವಾಗಿದೆ. ನ್ಯಾಯಾಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ನ್ಯಾಯವನ್ನು ಖಚಿತಪಡಿಸುತ್ತವೆ. ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ – MUDA ಪ್ರಕರಣದಲ್ಲಿ ನೀವು ಖಂಡಿತವಾಗಿಯೂ ಜೈಲಿಗೆ ಹೋಗುತ್ತೀರಿ” ಎಂದು ಹೇಳಿದರು.