ಮೊರಾಕೊ ಭೂಕಂಪ: 2000 ದಾಟಿದ ಸಾವಿನ ಸಂಖ್ಯೆ
ವಿನಾಶಕಾರಿ ಭೂಕಂಪದಿಂದಾಗಿ ಮೊರಾಕೊ ಸ್ಮಶಾನ ಸದೃಶವಾಗಿದೆ. ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 2,000 ದಾಟಿದ್ದು ಇಡೀ ಮೊರಾಕೊ ದೇಶ ಶೋಕದಲ್ಲಿದೆ.
ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದ್ದು, ಎಲ್ಲಾ ಸಾರ್ವಜನಿಕ ಸೌಲಭ್ಯಗಳಲ್ಲಿ ಧ್ವಜಗಳನ್ನು ಅರ್ಧಕ್ಕೆ ಹಾರಿಸಲಾಗುತ್ತದೆ. ಮೊರಾಕೊದ ಹಲವು ನಗರಗಳಲ್ಲಿ ಶುಕ್ರವಾರ ರಾತ್ರಿ 11:11 ಕ್ಕೆ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ಅಲ್ ಹೌಜ್ ಪ್ರಾಂತ್ಯದ ಇಘಿಲ್ ಪಟ್ಟಣ ಈ ಕಂಪನದ ಕೇಂದ್ರಬಿಂದುವಿದೆ. ಮಾರಾಕೇಶ್‌ನಿಂದ ಸುಮಾರು 70 ಕಿಮೀ ನೈಋತ್ಯಕ್ಕೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪವು 18.5 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಮೊರಾಕೊದ ಗೃಹ ಸಚಿವಾಲಯದ ಶನಿವಾರ ಪ್ರಕಟಿಸಿದ ಮಾಹಿತಿ ಪ್ರಕಾರ, ಭೂಕಂಪವು 2,012 ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು 2,059 ಮಂದಿ ಗಾಯಗೊಂಡಿದ್ದಾರೆ ಮತ್ತು 1,404 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ.