ಬೆಂಗಳೂರು: ಶಾಸಕ ಹ್ಯಾರಿಸ್ ಆಪ್ತ ಕಾಂಗ್ರೆಸ್ ನಾಯಕ ಹೈದರ್ ಅಲಿ ಭೀಕರ ಹತ್ಯೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಧ್ಯರಾತ್ರಿ ಭೀಕರ ಕೇಳೇ ನಡೆದಿದೆ. ಕಾಂಗ್ರೆಸ್ ಮುಖಂಡ ಹೈದರ್ ಅಲಿ ಎಂಬವರನ್ನು ಗರುಡ ಮಾಲ್ ಬಳಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಹೈದರ್ ಅಲಿ ಮಧ್ಯರಾತ್ರಿ ಕಾರ್ಯಕ್ರಮ ಮುಗಿಸಿ ಸ್ನೇಹಿತನ ಜೊತೆ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಅಶೋಕನಗರ ಠಾಣಾ ವ್ಯಾಪ್ತಿಯ ಗರುಡಾ ಮಾಲ್ ಬಳಿ ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಹೈದರ್ ಮಾತ್ರವಲ್ಲ ಸ್ನೇಹಿತನ ಮೇಲೂ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹೈದರ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಈ ನಡುವೆ, ಕೊಲೆಯಾದ ಹೈದರ್ ಆಲಿ ಶಾಸಕ ಎನ್.ಎ.ಹ್ಯಾರಿಸ್ ಅವರ ನಿಕಟವರ್ತಿಯಾಗಿದ್ದರು. ಅವರ ಮೃತದೇಹ ಬೌರಿಂಗ್ ಆಸ್ಪತ್ರೆಯಲ್ಲಿದ್ದ ಸುದ್ದಿ ತಿಳಿದು ಬೆಂಬಲಿಗರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಹೈದರ್ ಆಲಿ ಕೊಲೆ ಘಟನೆ ಬಗ್ಗೆ ಕೆಲವರು ಆಕ್ರೋಶ ಹೊರಹಾಕುತ್ತಿದ್ದ ಸನ್ನಿವೇಶಕ್ಕೂ ಆಸ್ಪತ್ರೆ ಆವರಣ ಸಾಕ್ಷಿಯಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡರು.