metro-light

ನೇರಳೆ ಸುಂದರಿಯ ಸವಾರಿ ಉದ್ಯಾನನಗರಿಗೆ ಮೆರಗು ತರುತ್ತಿದೆ. ಶುಕ್ರವಾರದವರೆಗೂ ಬೈಯಪ್ಪನಹಳ್ಳಿಯಿಂದ ಎಂ.ಜಿ.ರೋಡ್ ವರೆಗೆ ಸೀಮಿತವಿದ್ದ ಮೆಟ್ರೋ ರೈಲು ಸೇವೆ ಇದೀಗ ಮೈಸೂರು ರಸ್ತೆಯ ನಾಯಂಡಹಳ್ಳಿವರೆಗೂ ವಿಸ್ತಾರವಾಗಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿನ ಸುರಂಗದ ಹಾದಿಯನ್ನು ಈ ಮೆಟ್ರೋ ರೈಲು ಕ್ರಮಿಸುವ ಸೊಬಗಂತೂ ಪ್ರಯಾಣಿಕರ ಸೊಗಸಿಗೆ ಸಾಕ್ಷಿಯಾಗುತ್ತಿದೆ.
ದಕ್ಷಿಣ ಭಾರತದ ಪಾಲಿಗೆ ಸುರಂಗ ಮಾರ್ಗದಲ್ಲಿನ ಈ ಮೆಟ್ರೋ ಸವಾರಿ ಬೆಂಗಳೂರಿನದ್ದೆ ಪ್ರಥಮ. ಹಾಗಾಗಿ, ವರ್ಷಗಟ್ಟಲೆಯಿಂದಲೆ ಜನ ಈ ಸುರಂಗ ಸವಾರಿ ಬಗ್ಗೆ ಕಲ್ಪಿಸಿಕೊಂಡಿದ್ದಾರೆಯೇ ಹೊರತು, ಸವಾರಿಯನ್ನು ಅನುಭವಿಸಿರಲಿಲ್ಲ. ಹಾಗಾಗಿ, ಈ ಸುರಂಗದ ಸವಾರಿ ಜನರ ಕುತೂಹಲದ ಕೇಂದ್ರಬಿಂದುವಾಗಿತ್ತು. ಈ ಸುರಂಗದಲ್ಲಿ ಹಾದು ಹೋಗುವ ಸೊಬಗನ್ನು ಸವಿಯಲೆಂದೆ ಜನ ಎಂ.ಜಿ.ರಸ್ತೆಯಿಂದ ಮೆಜೆಸ್ಟಿಕ್ ವರೆಗೆ ಮೆಟ್ರೋ ರೈಲಲ್ಲಿ ಹೋಗಿ ಬರುವವರೆ ಹೆಚ್ಚು. ಬೆಳ್ಳಂಬೆಳಿಗ್ಗೆಯೆ ಈ ಸವಾರಿಗಾಗಿಯೇ ಜನ ಮುಗಿಬಿದ್ದಿದ್ದಾರೆ.
ಶನಿವಾರದಿಂದ ಮೈಸೂರು ರಸ್ತೆಯ ನಾಯಂಡಹಳ್ಳಿಯಿಂದ ಹಳೆ ಮದ್ರಾಸ್ ರಸ್ತೆಯ ಬೈಯಪ್ಪನಹಳ್ಳಿಗೆ ಕಡಿಮೆ ಅವಧಿಯಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಿದೆ. ಈ 18 ಕಿಲೋ ಮೀಟರ್ ದೂರವನ್ನು ಬಸ್, ಕಾರು ಅಥವಾ ಇತರ ವಾಹನಗಳಲ್ಲಿ ಕ್ರಮಿಸಬೇಕಾದರೆ, ಕನಿಷ್ಟ ಒಂದೂವರೆ ತಾಸಾದರೂ ಬೇಕು. ಆದರೆ, ಈ ಮೆಟ್ರೋ ಸವಾರಿ ಮೂಲಕ ಅರ್ಧ ಗಂಟೆಯೊಳಗಾಗಿ ಈ ಅಂತರವನ್ನು ಕ್ರಮಿಸಬಹುದಾಗಿದೆ. ಅದಕ್ಕಿಂತಲೂ ಮಿಗಿಲಾಗಿ ಇದೊಂದು ಸಂಪೂರ್ಣ ಹವಾನಿಯಂತ್ರಿತ ಲಕ್ಸುರಿ ಸವಾರಿ. ವಾಹನ ಹೊರಸೂಸುವ ಮಾಲಿನ್ಯ ಈ ಮೆಟ್ರೋದಲ್ಲಿಲ್ಲ. ಜೊತೆಗೆ ಸುರಂಗ ಮೂಲಕ ಹಾದು ಹೋಗುವ ಅನುಭವವೂ ಲಭಿಸುತ್ತದೆ ಎನ್ನುತ್ತಿದ್ದಾರೆ ಪ್ರಯಾಣಿಕರು.
ಕೆಲಸಕ್ಕಾಗಿ ತೆರಳುವವರಿಗೆ ಈ ಮೆಟ್ರೋ ಒಳ್ಳೆಯ ಅವಕಾಶವನ್ನೆ ಕಲ್ಪಿಸಿಕೊಟ್ಟಿದೆ. ಟ್ರಾಫಿಕ್ ಜಂಟಾಟದಿಂದ ಬೇಸತ್ತಿದ್ದ ಜನ ಈ ಮೆಟ್ರೋ ರೈಲು ಮೂಲಕ ಆ ಪರದಾಟದಿಂದ ತಪ್ಪುವಂತಾಗಿದೆ. ಇದರಿಂದ ತಮಗೆ ಖುಷಿಯಾಗುತ್ತಿದೆ ಎನ್ನುತ್ತಿದ್ದಾರೆ ಜನ.

Leave a Reply

Your email address will not be published. Required fields are marked *