ಮತ್ತೊಮ್ಮೆ ಬಸ್ ಟಿಕೆಟ್ ದರ ಏರಿಕೆ ಮಾಡುವುದರಲ್ಲಿ ಅನುಮಾನವೇ ಇಲ್ಲ; ಅಶೋಕ್

0
R Ashok- BJP

ಬೆಂಗಳೂರು: ಕನ್ನಡಿಗರಿಗೆ ಈ ವರ್ಷ ಮಾರಿಹಬ್ಬ ಕಾದಿದೆ ಎಂದು ಬಜೆಟ್ ಅಧಿವೇಶನದಲ್ಲಿ ನೀಡಿದ್ದ ಎಚ್ಚರಿಕೆ ಈಗ ಅಕ್ಷರಶಃ ನಿಜವಾಗುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿಶ್ಲೇಷಿಸಿದ್ದಾರೆ.

ಬಜೆಟ್ ನಲ್ಲಿ ಯಾವುದೇ ತೆರಿಗೆ ಹೆಚ್ಚಳವನ್ನ, ಬೆಲೆ ಏರಿಕೆಯನ್ನ ಘೋಷಣೆ ಮಾಡದೆ ಕನ್ನಡಿಗರ ಕಿವಿಗೆ ಹೂವಿಟ್ಟ ಸಿಎಂ ಸಿದ್ದರಾಮಯ್ಯ ಅವರು ಈಗ ದಿನಕ್ಕೊಂದು ವಸ್ತುಗಳ ಮೇಲೆ ತೆರಿಗೆ ಹಾಕಿ, ಬೆಲೆ ಹೆಚ್ಚಿಸಿ, ಬಡವರು, ಮಾಧ್ಯಮ ವರ್ಗದ ರಕ್ತ ಹೀರಲು ಹೊರಟಿದ್ದಾರೆ ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಹಾಲಿನ ದರ ಏರಿಕೆ ಮಾಡಿದ್ದಾಯ್ತು, ಕಸ ಸಂಗ್ರಹಣ ಮೇಲೆ ಸೆಸ್ ಹಾಕಿದ್ದಾಯ್ತು, ಈ ದರಿದ್ರ ಕಾಂಗ್ರೆಸ್ ಸರ್ಕಾರ ಈಗ ಏಕಾಏಕಿ ಡೀಸೆಲ್ ಬೆಲೆಯನ್ನು ಲೀಟರ್ ಗೆ 2 ರೂಪಾಯಿ ಏರಿಕೆ ಮಾಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಡೀಸೆಲ್ ಅಂದರೆ ಅದು ಸರಕು ಸಾಗಾಣಿಕೆಗೆ ಉಪಯೋಗಿಸುವ ಇಂಧನ. ಡೀಸೆಲ್ ಬೆಲೆ ಹೆಚ್ಚಾದರೆ ಹಾಲು, ತರಕಾರಿ, ಹಣ್ಣು, ದಿನಸಿ, ಟ್ಯಾಕ್ಸಿ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ, ಸೇವೆಗಳ ಬೆಲೆ ಹೆಚ್ಚಾಗುತ್ತವೆ ಎಂದು ಸ್ವಯಂಘೋಷಿತ ಆರ್ಥಿಕ ತಜ್ಞರಾದ ಸಿದ್ದರಾಮಯ್ಯನವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿರುವ ಅಶೋಕ್, ಸಾರಿಗೆ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲದೆ ಇತ್ತೀಚೆಗಷ್ಟೆ ಬಸ್ ಟಿಕೆಟ್ ದರ ಏರಿಕೆ ಆಗಿತ್ತು. ಈಗ ಡೀಸೆಲ್ ಬೆಲೆ ಏರಿಕೆ ಆಗಿದೆ ಎನ್ನುವ ನೆಪವೊಡ್ಡಿ ಮತ್ತೊಮ್ಮೆ ಬಸ್ ಟಿಕೆಟ್ ದರ ಏರಿಕೆ ಮಾಡುವುದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.
ಇನ್ನು ಯಾವ ಯಾವ ವಸ್ತುಗಳ ಮೇಲೆ ತೆರಿಗೆ ಹಾಕಬೇಕು, ಯಾವ ಯಾವ ವಸ್ತುಗಳ ಬೆಲೆ ಏರಿಕೆ ಮಾಡಬೇಕು ಎಂದು ಹೊಂಚು ಹಾಕಿದ್ದೀರಿ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿರುವ ಅಶೋಕ್, ಬಡವರು, ಮಧ್ಯಮ ವರ್ಗದ ರಕ್ತ ಹೀರುತ್ತಿರುವ ರಕ್ತಪಿಪಾಸು ಕಾಂಗ್ರೆಸ್ ಸರ್ಕಾರಕ್ಕೆ ಜನರ ಶಾಪ ತಟ್ಟದೇ ಇರದು ಎಂದಿದ್ದಾರೆ.

Leave a Reply

Your email address will not be published. Required fields are marked *