ಬಾಯಲ್ಲಿ ನೀರೂರಿಸುವ ಮಾವಿನ ಮೇಳೆ
ಈ ಬಾರಿ ಹೆಚ್ಚಿನ ಬಿಸಿಲು ಮತ್ತು ಹವಾಮಾನ ವೈಪರೀತ್ಯದಿಂದ ಮಾವು ಇಳುವರಿ ಕಡಿಮೆಯಾಗಿದೆ. ತೋಟಗಾರಿಕೆ ಇಲಾಖೆ ವತಿಯಿಂದ ರಾಮನಗರದಲ್ಲಿ ಆಯೋಜಿಸಿರುವ ಮಾವು ಮೇಳದಲ್ಲಿ ಸಾವಿರಾರು ಗ್ರಾಹಕರು ರುಚಿಕರವಾದ ಮಾವಿನ ತಳಿಯ ಹಣ್ಣುಗಳನ್ನ ಖರೀದಿಸಿ ಮಾವು ಮೇಳಕ್ಕೆ ಭರ್ಜರಿ ಆರಂಭ ನೀಡಿದ್ದಾರೆ. ಬಾದಾಮಿ, ರಸಪುರಿ, ಸೇಂಧೂರ, ನೀಲಂ, ತೋತಾಪುರಿ, ಮಾಲ್ಗೋಬಾ ಸೇರಿದಂತೆ ವಿವಿಧ ತಳಿಯ ಮಾವಿನಹಣ್ಣುಗಳು ಮಾರುಕಟ್ಟೆಯಲ್ಲಿ ಗ್ರಾಹಕರನ್ನ ಆಕರ್ಷಿಸುತ್ತಿದೆ.
ಮಾವು ಬೆಳೆ ರೈತರಿಗೆ ಹೆಚ್ಚಿನ ಆದಾಯ ತರುವ ಬೆಳೆಯಾಗಿದೆ. ರಾಮನಗರ ಜಿಲ್ಲೆಯ ರೈತರಲ್ಲಿ ಶೇಕಡಾ 80 ರಷ್ಟು ಮಂದಿ ಮಾವು ಬೆಳೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಬಾದಾಮಿ, ರಸಪುರಿ, ಸೇಂಧೂರ, ನೀಲಂ, ತೋತಾಪುರಿ, ಮಾಲ್ಗೋಬಾ ಸೇರಿದಂತೆ ಪ್ರಮುಖ ತಳಿಗಳನ್ನ ರೈತರು ಬೆಳೆಯುತ್ತಿದ್ದಾರೆ. ಈ ಬಾರಿ ಬಿಸಿಲು ಹೆಚ್ಚಾಗಿರುವುದರಿಂದ ಮಾವಿನ ಹೂವು ಕಾಯಿಯಾಗುವುದಕ್ಕಿಂತ ಮುಂಚೆಯೇ ಉದುರುತ್ತಿವೆ.
ಆದರೂ ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ಕರ್ನಾಟಕ ಮಾವು ಅಭಿವೃದ್ಧಿ ಮಂಡಳಿ ವತಿಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಜನಪದಲೋಕ ಹಾಗೂ ಶಿವಳ್ಳಿ ರೆಸ್ಟೋರೆಂಟ್ ಬಳಿ ಹದಿನೈದು ಮಳಿಗೆಗಳನ್ನು ಆಯೋಜಿಸಲಾಗಿದ್ದು, ಮಾವು ಪ್ರಿಯರ ಮನ ಸೆಳೆಯುತ್ತಿದೆ.
ಯಾವುದೇ ರಾಸಾಯನಿಕ ಬಳಸದೇ ನೈಸರ್ಗಿಕವಾಗಿ ಕಾರ್ಬೈಡ್ ಮುಕ್ತ ಹಣ್ಣು ಮಾಡಿರುವ ಮಾವಿನ ಹಣ್ಣುಗಳು ಮಾವು ಮೇಳದಲ್ಲಿ ಗ್ರಾಹಕರನ್ನ ಸೆಳೆಯುತ್ತಿವೆ. ಜೇನು ಸಕ್ಕರೆಯಷ್ಟೇ ರುಚಿಯಾಗಿರುವ ಮಾವಿನ ಹಣ್ಣುಗಳನ್ನ ನೇರವಾಗಿ ರೈತರಿಂದ ಗ್ರಾಹಕರು ಖರೀದಿಸುತ್ತಿದ್ದಾರೆ. ಇದರಿಂದ ಮಧ್ಯವರ್ತಿಗಳ ಕಾಟದಿಂದ ರೈತ ಮತ್ತು ಗ್ರಾಹಕರು ಮುಕ್ತಿ ಹೊಂದಿದ್ದಾರೆ.
ರಾಮನಗರ ಜಿಲ್ಲೆಯಾದ್ಯಂತ ಸುಮಾರು 20 ರಿಂದ 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯನ್ನು ಬೆಳೆಯಲಾಗುತ್ತಿದೆ. ಆರಂಭದಲ್ಲಿ ಉತ್ತಮ ಫಸಲು ಬರಬಹುದೆಂದು ನಿರೀಕ್ಷೆಯಿತ್ತು. ಡಿಸೆಂಬರ್‌ನಲ್ಲಿ ಅಲ್ಪ ಪ್ರಮಾಣದ ಮಳೆ ಬಿದ್ದಿದರಿಂದ ಮಾವಿನ ಮರದಲ್ಲಿ ಹೂವು ಬಿಡುವುದು ವಿಳಂಭವಾಗಿದ್ದರಿಂದ ಸೂರ್ಯನ ತಾಪ ಹೆಚ್ಚಾಗಿ ಹೂವುಗಳು ನೆಲಕಚ್ಚುವಂತಾಗಿತ್ತು.
ಆದರೂ ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ಮಾವು ಅಭಿವೃದ್ದಿ ಮಂಡಳಿ ಸಹಕಾರದೊಂದಿಗೆ ರೈತರು ಉತ್ತಮ ಇಳುವರಿಯನ್ನು ಪಡೆದು ರೈತರು ಹಣ್ಣನ್ನ ಮಾರುಕಟ್ಟೆಗೆ ಬಿಟ್ಟಿದ್ದಾರೆ. ರೈತರಿಂದ ಗ್ರಾಹಕರಿಗೆ ನೇರವಾಗಿ ತಲುಪಿಸಲು ಈ ಮಾವು ಮೇಳ ಸಹಕಾರಿಯಾಗಿದೆ.
ರೈತರಿಂದ ನೇರವಾಗಿ ಮಾವುವನ್ನು ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಮಾವು ಮೇಳ ಆಯೋಜಿಸಲಾಗಿದ್ದು, ಜಾನಪದ ಲೋಕ ಮತ್ತು ಸುತ್ತಮುತ್ತ ಇರುವ ಹೋಟೆಲ್‌ಗಳಿಗೆ ಹೋಗುವ ಗ್ರಾಹಕರನ್ನು ಮೇಳ ಸೆಳೆಯುತ್ತಿದೆ.