ವರ್ಣರಂಜಿತ ಕುದ್ರೋಳಿ ದಸರಾ ಉತ್ಸವ ; ವೈಭವೋಪೇತ ಶಾರದಾ ಮೆರವಣಿಗೆ
ಕರಾವಳಿ ದಸರಾ ಅದ್ದೂರಿ ಮಹೋತ್ಸವಕ್ಕೆ ಸಾಕ್ಷಿಯಾಯಿತು. ಹತ್ತು ದಿನಗಳ ಕಾಲ ನಡೆದ ಕುದ್ರೋಳಿ ದಸರಾದ ಅಂತಿಮ ಉತ್ಸವದಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ಪುನೀತರಾದರು. ಹತ್ತು ದಿನಗಳ ಕಾಲ ಪೂಜಿಸಲ್ಪಟ್ಟ ಹನ್ನೊಂದು ದೇವತೆಗಳನ್ನು ಶುಕ್ರವಾರ ಸಂಜೆಯಿಂದ ನಡೆದ ಅದ್ದೂರಿ ಮೆರವಣಿಗೆಯಲ್ಲಿ ಕೊಂಡೊಯ್ದು ವಿಸರ್ಜಿಸಲಾಯಿತು.
ವರ್ಣರಂಜಿತ ಕುದ್ರೋಳಿ ದಸರಾ ವರ್ಣರಂಜಿತ ಉತ್ಸವಕ್ಕೆ ಸಾಕ್ಷಿಯಾಯಿತು. ದೇಶದಲ್ಲಿ ಅನನ್ಯವೆಂಬಂತೆ ಕುದ್ರೋಳಿ ಕ್ಷೇತ್ರದಲ್ಲಿ ಹನ್ನೊಂದು ದೇವತೆಗಳನ್ನು ಪೂಜಿಸಲಾಗುತ್ತಿತ್ತು. ನವರಾತ್ರಿ ಸಂಭ್ರಮದಲ್ಲಿ ನವದುರ್ಗೆ ಆರಾಧನೆ ಸಾಮಾನ್ಯ. ಆದರೆ ಕರಾವಳಿ ದಸರಾದಲ್ಲಿ ನವದುರ್ಗೆಯರು ಮಾತ್ರವಲ್ಲ ಶಾರದೆ ಹಾಗೂ ಮಹಾಗಣಪತಿಗೂ ವಿಶೇಷ ಪೂಜೆ ಸಮರ್ಪಿಸಲಾಗುತ್ತಿತ್ತು.
ಈ ದೇವತಾ ಮೂರ್ತಿಗಳನ್ನು ಶುಕ್ರವಾರ ಸಂಜೆ ಕುದ್ರೋಳಿ ಕ್ಷೇತ್ರದಿಂದ ಪ್ರತ್ಯೇಕ ಅಲಂಕೃತ ವಾಹನಗಳಲ್ಲಿ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮಾಜಿ ಕೇಂದ್ರ ಸಚಿವ ಜನಾರ್ದನಪೂಜಾರಿ ಅವರ ಉಸ್ತುವಾರಿಯಲ್ಲಿ ನಡೆದ ಈ ವೈಭವೋಪೇತ ಶಾರದಾ ಮೆರವಣಿಗೆಯಲ್ಲಿ ನೂರಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಪಾಲ್ಗೊಂಡು ಆಕರ್ಷಣೆ ತುಂಬಿದವು.
ವಿವಿಧ ಜನಪದ ಕಲಾತಂಡಗಳ ಪ್ರದರ್ಶನವೂ ಕುದ್ರೋಳಿ ದಸರಾದ ಈ ಯಾತ್ರೆಗೆ ಮೆರಗು ತಂದುಕೊಟ್ಟವು. ಪ್ರಮುಖವಾಗಿ ಕೇರಳದ ಚಂಡ ಮದ್ದಳೆ, ಹುಲಿವೇಷಧಾರಿಗಳ ನರ್ತನ, ಕಂಗೀಲು ಕುಣಿತ, ಕಂಸಾಳೆ ಕುಣಿತ, ಶಿಲ್ಪಗೊಂಬೆ ಸೇರಿದಂತೆ ನೂರಕ್ಕೂ ಹೆಚ್ಚು ಕಲಾತಂಡಗಳ ಪ್ರದರ್ಶನ ಗಮನಸೆಳೆದವು.
ಮಣ್ಣಗುಡ್ಡ, ಲಾಲ್ ಬಾಗ್, ಪಿವಿಎಸ್ ವೃತ್ತ, ಹಂಪನಕಟ್ಟೆ ವೃತ್ತ, ಜಿಎಚ್ಎಸ್ ರೋಡ್, ರಥಬೀದಿ ಸೇರಿದಂತೆ ಪ್ರಮುಖ ಬಡಾವಣೆಗಳನ್ನು ಕ್ರಮಿಸಿದ ಈ ಶೋಭಾಯಾತ್ರೆ ಕುದ್ರೋಳಿ ಪುಷ್ಕರಣಿವರೆಗೂ ಸಾಗಿಬಂತು. ಬಳಿಕ ಜಯಘೋಷಗಳೊಂದಿಗೆ ಈ ಉತ್ಸವ ದೇವತಾ ಮೂರ್ತಿಗಳನ್ನು ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು.