ಮಣಪ್ಪುರಂ ಫೈನಾನ್ಸ್ ದರೋಡೆ ಪ್ರಕರಣ ; ಐವರ ಬಂಧನ
ಕೆಲ ದಿನಗಳ ಹಿಂದೆ ಬೆಂಗಳೂರಿನ ಜ್ಞಾನಗಂಗಾ ನಗರದಲ್ಲಿ ನಡೆದ ಮಣಪ್ಪುರಂ ಫೈನಾನ್ಸ್ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಐವರನ್ನು ಬಂಧಿಸಿ ಸುಮಾರು 14 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಅಕ್ಟೋಬರ್ 14ರಂದು ಜ್ಞಾನಭಾರತಿ ಬಳಿಯ ಜ್ಞಾನಗಂಗಾ ನಗರದಲ್ಲಿ ನಡೆದ ಮಣಪ್ಪುರಂ ಫೈನಾನ್ಸ್ ದರೋಡೆ ಪ್ರಕರಣ ತಲ್ಲಣ ಸೃಷ್ಟಿಸಿತ್ತು. ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಎಂದರೆ ಈ ದರೋಡೆಕೋರರು ತಮಿಳು ಸಿನಿಮಾವೊಂದರ ದೃಶ್ಯದ ರೀತಿಯಲ್ಲಿಯೇ ಮಂಕಿ ಕ್ಯಾಪ್ ಧರಿಸಿ ನಿಜ ದರೋಡೆ ಕೃತ್ಯದಲ್ಲಿ ಪಾತ್ರಧಾರಿಗಳಾಗಿರುವುದು. ಸಿಸಿ ಕ್ಯಾಮರಾ ಇದ್ದರೂ ಆ ಕಚೇರಿಗೆ ನುಗ್ಗಿದ ಚಾಲಾಕಿ ದರೋಡೆ ಕೋರರು, ಹಣಕಾಸು ಸಂಸ್ಥೆಯಲ್ಲಿದ್ದ ಸಿಬ್ಬಂದಿಯನ್ನು ಕಟ್ಟಿ ಹಾಕಿ ಹಣ ದೋಚಿದ್ದರು. ಸಿಸಿ ಕ್ಯಾಮೆರಾ ಇದೆ ಎಂಬ ಕಾರಣಕ್ಕಾಗಿ ಆ ದರೋಡೆಕೋರರು ಮಂಕಿ ಕ್ಯಾಪ್ ಧರಿಸಿದ್ದರು. ಮಾರಕಾಸ್ತ್ರ ತೋರಿಸಿ ಅಲ್ಲಿದ್ದವರನ್ನು ಬೆದರಿಸಿದರು. ಬಳಿಕ, ಎಲ್ಲರನ್ನು ಕಟ್ಟಿ ಹಾಕಿ ಖಜಾನೆಯಲ್ಲಿದ್ದ 16 ಕೆ.ಜಿ. ಚಿನ್ನದ ಗಟ್ಟಿಯನ್ನು ದೋಚಿದ್ದರು. ಅವರ ಕೃತ್ಯ ಅಷ್ಟಕ್ಕೆ ಮುಗಿಯಲಿಲ್ಲ. ತಮ್ಮ ಹೆಜ್ಜೆಗುರುತು ಬೆನ್ನತ್ತಿ ಬರುವ ಪೊಲೀಸರ ದಿಕ್ಕು ತಪ್ಪಿಸಲು ತಾವು ಹೋದ ಜಾಗಕ್ಕೆ ಖಾರದಪುಡಿ ಎರಚಿದ್ದರು. ಒಂದು ವೇಳೆ ಶ್ವಾನದಳಕ್ಕೂ ಚಹರೆ ಪತ್ತೆ ಹಚ್ಚಲು ಸಾಧ್ಯವಾಗಬಾರದೆಂಬ ಉದ್ದೇಶದಿಂದ ಈ ಕಳ್ಳರು, ಈ ಚಾಲಾಕಿ ತಂತ್ರ ಅನುಸರಿಸಿದ್ದರು.
ಆದರೆ, ಸಿಸಿ ಕ್ಯಾಮೆರಾ ಈ ಪುಂಡರ ಬಗ್ಗೆ ಕ್ಲೂ ನೀಡದಿದ್ದರೂ ಕಾರ್ಯಾಚರಣೆಗಿಳಿದ ಪೊಲೀಸರು, ಕೃತ್ಯ ನಡೆದ ಅವಧಿಯಲ್ಲಿ ಆ ಸ್ಥಳದಿಂದ ಹೋಗಿ ಬಂದಿರುವ ಕರೆಗಳ ವಿವರವನ್ನು ಪತ್ತೆ ಹಚ್ಚಿದರು. ಶಂಕಿತ ತಮಿಳುನಾಡು ಸಿಮ್ ನಿಂದ ನಡೆದಿರುವ ಸಂಭಾಷಣೆಯ ವಿವರವನ್ನು ಕಲೆ ಹಾಕಿದ ಪೊಲೀಸರು, ಸುರೇಶ್ ಎಂಬಾತನಿಗೆ ಸೇರಿದ್ದ ಆ ಸಂಪರ್ಕದ ಬಗ್ಗೆ ನಿಗಾವಹಿಸಿ, ಆತನನ್ನು ಟ್ರ್ಯಾಪ್ ಮಾಡಿದರು. ಆತ ನೀಡಿದ ಸುಳಿವನ್ನಾಧರಿಸಿ ಧನಶೇಖರ್, ರಾಮು, ಸುರೇಶ ಹಾಗೂ ವಿನೋದ್ ಎಂಬವರನ್ನು ಒಬ್ಬೊಬ್ಬರನ್ನಾಗಿ ಕೆಡ್ಡಾಕ್ಕೆ ಕೆಡವಿದ ಪೊಲೀಸರು, ಸುಮಾರು 14 ಕೆ.ಜಿ. ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಒಂದು ಕೆ.ಜಿ. ಚಿನ್ನದ ಗಟ್ಟಿ ಮತ್ತೊಬ್ಬ ಆರೋಪಿ ಶಿವು ಎಂಬಾತನಿಗೆ ಹಂಚಿ ಹೋಗಿದ್ದು, ಆತನಿಗಾಗಿಯೂ ಪೊಲೀಸರು ಬಲೆ ಬೀಸಿದ್ದಾರೆ.