ಯಶೋಗಾಥೆ ಬರೆದ ತಾಂಝಿ
ಪಕ್ಕದ ಊರಿಗೆ ತೆರಳಲು ಬೆಟ್ಟ ಹತ್ತಿ ಸಾಗಲೇಬೇಕಿತ್ತು. ಆ ಬೆಟ್ಟ ಹತ್ತಿ ಸಾಗಿದಾಗಲೇ ತನ್ನ ಮಡದಿ ಸಾವನ್ನಪ್ಪಿದಳೆಂಬ ಸಿಟ್ಟಿಗೆದ್ದ ದಶರಥ ಮಾಂಝಿ ಎಂಬಾತ ಅದೇ ಪರ್ವತವನ್ನು ಇಂಚಿಂಚೂ ಅಗೆದ ಕತೆ ಜನಜನಿತ. ಆತ ಬೆಟ್ಟವನ್ನು ಬಗೆದು ಊರವರಿಗೆ ದಾರಿ ಮಾಡಿಕೊಟ್ಟ ಮಾಂಝಿಯ ಕತೆ ಇದೀಗ ಹಳೆಯ ಇತಿಹಾಸ. ಅಂತಹದ್ದೇ ಯಶೋಗಾಥೆಗೆ ಸಾಕ್ಷಿಯಾಗಿದ್ದಾನೆ ಮಹಾರಾಷ್ಟ್ರದ ಕಲಂಬೇಶ್ವರ ಗ್ರಾಮದ ತಾಂಝಿ ಎಂಬಾತ.
ಮಹಾರಾಷ್ಟ್ರದ ವಾಷಿಮ್ ಜಿಲ್ಲೆಯ ಕಲಂಬೇಶ್ವರ ಗ್ರಾಮದ ಬಾಪೂರಾವ್ ತಾಂಝಿ ಎಂಬಾತ ತನ್ನ ಹೆಂಡತಿಗೆ ಆದ ಅಪಮಾನ ತಾಳಲಾರದೆ ಇಂತಹದ್ದೊಂದು ಪ್ರಯತ್ನ ಮಾಡಿದ್ದಾನೆ. ಈತ ಮಾಡಿದ್ದು ಬಾವಿ ತೋಡುವ ಕೆಲಸವನ್ನು. ತಾವು ದಲಿತರಾಗಿದ್ದರಿಂದ ತನ್ನ ಪತ್ನಿಗೆ ನೀರು ಕೊಡದೆ ಊರವರು ಅಪಮಾನಿಸಿದರೆಂಬ ಒಂದೇ ಒಂದು ಕಾರಣಕ್ಕಾಗಿ ಈ ತಾಂಝಿ ತನ್ನ ಪತ್ನಿಗಾಗಿ ಬಾವಿ ತೋಡಿದ್ದಾನೆ. ತನ್ನ ಪತ್ನಿ ಸಂಗೀತ ನೀರು ತರಲು ನೆರೆಮನೆಗೆ ಹೋದಾಗ, ನೀರು ಕೊಡಲಿಲ್ಲ. ಬದಲಾಗಿ ಅಪಮಾನ ಮಾಡಿದರು.
ಈ ವಿಷಯ ತಿಳಿದ ಆಕೆಯ ಪತಿ ಮಾಝಿ, ತಾನೇ ಒಂದು ಸ್ವಂತ ಬಾವಿ ತೋಡುತ್ತೇನೆ ಎಂದು ಛಲಕ್ಕಿಳಿದ. ಮಾಲೇಗಾಂವ್ ಗೆ ತೆರಳಿ ಬಾವಿ ತೋಡಲಾರಂಭಿಸಿದ. ನಿತ್ಯವೂ 6 ತಾಸು ಕಾಲ ಕೆಲಸಕ್ಕಿಳಿದ ಈತ, 40 ದಿನಗಳಲ್ಲಿ ಬಾವಿ ತೋಡಿದ್ದಾನೆ. 15 ಅಡಿ ಆಳದ ಈ ಬಾವಿಯಲ್ಲಿ ನೀರು ಸಿಕ್ಕಿದೆ. 15 ಅಡಿಗಳಷ್ಟು ಆಳಕ್ಕೆ ತಾನೊಬ್ಬನೇ ಬಾವಿ ತೋಡಿದರೆ, ಆನಂತರ ಊರವರು ಬಂದು ಈತನಿಗೆ ನೆರವಾಗಿದ್ದಾರೆ.
ಮಾಂಝಿಯ ಕತೆಯಂತೆಯೇ ತಾಂಝಿಯ ಯಶೋಗಾಥೆಯೂ ಮಹಾರಾಷ್ಟ್ರದಾದ್ಯಂತ ಸುದ್ದಿಯಾಗಿದ್ದಾನೆ. ಈತನಿಗೆ ಪ್ರಶಂಶೆಯ ಮಹಾಪೂರವೇ ಹರಿದು ಬಂದಿದೆ.