ಸಕ್ಕರೆ ಕಾರ್ಖಾನೆ ಮಾಲೀಕರು ಸಚಿವ ಸಂಪುಟಕ್ಕೆ ಸೇರುವುದನ್ನ ತಪ್ಪಿಸಿ ರಾಜ್ಯದ 30 ಲಕ್ಷ ರೈತರ ಬದುಕು ಸಂರಕ್ಷಿಸಿ

0

ಬೆಂಗಳೂರು: ಸಕ್ಕರೆ ಕಾರ್ಖಾನೆ ಮಾಲೀಕರು ಸಚಿವ ಸಂಪುಟಕ್ಕೆ ಸೇರುವುದನ್ನ ತಪ್ಪಿಸಿ ರಾಜ್ಯದ 30 ಲಕ್ಷ ರೈತರ ಬದುಕು ಸಂರಕ್ಷಿಸಿ ಎಂದು ಹೊಸ ಸರ್ಕಾರಕ್ಕೆ ಸೂಚನೆ ಕೊಡಿ ಎಂದು ರೈತ ಮುಖಂಡರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ‌.

ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ ಗೆಲ್ಲೋಟ್ ಅವರನ್ನು ಭೇಟಿ ಮಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದ ರೈತ ಮುಖಂಡರ ನಿಯೋಗವು ತಮ್ಮ ಬೇಡಿಕೆ ಬಗ್ಗೆ ಗಮನಸೆಳೆಯಿತು. ರಾಜ ಭವನದಲ್ಲಿ ರೈತ ಮುಖಂಡರ ಭೇಟಿಗೆ ಐದು ಮುಖಂಡರಿಗೆ ಸಮಯ ಅವಕಾಶ ನೀಡಲಾಗಿತ್ತು. ಬೇಟಿಗೆ ಹೋದಾಗ ಎಲ್ಲ ಮುಖಂಡರಿಗೂ ಅವಕಾಶ ನೀಡಬೇಕೆಂದು ಕೋರಿಕೊಂಡಾಗ ರಾಜ್ಯಪಾಲರು ಸಮ್ಮತಿಸಿ ಎಲ್ಲರನ್ನೂ ರಾಜ ಭವನದ ಒಳಗೆ ಕರೆಸಿಕೊಂಡರು. ಸುಮಾರು 15 ನಿಮಿಷಗಳ ಕಾಲ ಎಲ್ಲ ಮುಖಂಡರ ಪರಿಚಯ ಮಾಡಿಕೊಂಡು ಕೃಷಿ ಚಟುವಟಿಕೆಯ ಬಗ್ಗೆ ಪ್ರತಿಯೊಬ್ಬರಿಂದಲೂ ತಿಳಿದುಕೊಂಡರು.

ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ವಿವರವಾಗಿ ಸಮಸ್ಯೆ ತಿಳಿಸಿದರು. ರಾಜ್ಯದಲ್ಲಿರುವ 78 ಸಕ್ಕರೆ ಕಾರ್ಖಾನೆಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳ ಶಾಸಕರು ಮಾಲೀಕರು ಇರುವ ಕಾರಣ ಯಾವುದೇ ಸರ್ಕಾರ ಬಂದರೂ ಸಚಿವ ಸಂಪುಟದಲ್ಲಿ ಸೇರುವುದರಿಂದ 30 ಲಕ್ಷ ಕಬ್ಬು ಬೆಳೆಗಾರರ ರೈತರಿಗೆ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಗಮನಸೆಳೆದರು‌.

ಹಿಂದಿನ ಸರ್ಕಾರ ಕಬ್ಬಿನ ಎಫ್‌ಆರ್‌ಪಿ ದರವನ್ನು150 ರೂ ಏರಿಕೆ ಮಾಡಿ ಆದೇಶ ಹೊರಡಿಸಲಾಗಿತ್ತು. ಇದಕ್ಕೆ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು ಹೆಚ್ಚುವರಿ ಹಣ ಪಾವತಿಸದೆ ರೈತರನ್ನ ಸಂಕಷ್ಟಕ್ಕೆ ತಳಿದ್ದಾರೆ.  ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಕಬ್ಬಿನ ದರವನ್ನ 3800 ರಿಂದ 4500 ತನಕ ನೀಡುತ್ತಿದ್ದಾರೆ.ರಾಜ್ಯ ಸರ್ಕಾರ ಹೆಚ್ಚುವರಿ ಬೆಲೆ ನಿಗದಿ ಮಾಡಿದ ಹಿ೦ದಿನ ಎಲ್ಲ ವರ್ಷಗಳಲ್ಲೂ ಇದೇ ರೀತಿ ಚಟುವಟಿಕೆ ನಡೆಸುತ್ತಿದ್ದಾರೆ  ಸರ್ಕಾರ ಜಿಲ್ಲಾಡಳಿತಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರೂ ಆ ಜಿಲ್ಲೆಯ ಉಸ್ತುವಾರಿ ಸಚಿವರು ಬಹಳಷ್ಟು ಸಾರಿ ಸಕ್ಕರೆ ಕಾರ್ಖಾನೆ ಮಾಲೀಕರು ಸಚಿವರಾಗಿರುವ ಕಾರಣ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುತ್ತಿದ್ದಾರೆ ಎಂದು ಕುರುಬೂರು ಶಾಂತಕುಮಾರ್ ಅವರು ರಾಜ್ಯಪಾಲರ ಗಮನಕ್ಕೆ ತಂದರು.

ಸಕ್ಕರೆ ಅಭಿವೃದ್ಧಿ ಆಯುಕ್ತರು ಕೂಡ ಪದೇ ಪದೇ ಬದಲಾಗುತ್ತಿರುವುದರಿಂದ ಯಾವುದೇ ಕಾನೂನು ಆದೇಶಗಳನ್ನು ಸಮರ್ಪಕ ಜಾರಿ ಮಾಡುವಲ್ಲಿ ಸಾಧ್ಯವಾಗುತ್ತಿಲ್ಲ. ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಇಲಾಖೆ ಎಲ್ಲಾ ವಿಚಾರಗಳನ್ನ ಅರ್ಥ ಮಾಡಿಕೊಂಡು ಕ್ರಮ ಕೈಗೊಳ್ಳುವ ಹ೦ತಕ್ಕೆ ಹೋದಾಗ ಆ ಅಧಿಕಾರಿ ವರ್ಗಾವಣೆ ಮಾಡಲಾಗುತ್ತಿದೆ. ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೂ ಮನವಿ ಸಲ್ಲಿಸಿದ್ದೇವೆ. ಆದ್ದರಿಂದ ಇಲಾಖೆಯ ಮುಖ್ಯಸ್ಥರನ್ನು ಸರ್ಕಾರದ ಅಧಿಕಾರಿಗಳ ವರ್ಗಾವಣೆ ನಿಯಮದಂತೆ ಕನಿಷ್ಠ ಮೂರು ವರ್ಷಗಳು ಕಡ್ಡಾಯವಾಗಿ ಕಾರ್ಯ ನಿರ್ವಹಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಬ್ಯಾಂಕುಗಳಲ್ಲಿ ರೈತರು ಸಾಲ ಪಡೆಯಲು ಸಿಬಿಲ್ ಸ್ಕೋರ್ ಮಾನದಂಡವನ್ನು ಅನುಸರಿಸುತ್ತಿರುವ ಕಾರಣ ರೈತರಿಗೆ ಕೃಷಿ ಸಾಲ ಸಿಗುತ್ತಿಲ್ಲ‌. ತುಂಬಾ ಸಂಕಷ್ಟ ಅನುಭವಿಸುವಂತಾಗಿದೆ ರೈತರಿಗೆ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಮಾನದಂಡವನ್ನು ಕೈ ಬಿಡಲು ಸೂಚನೆ ನೀಡಬೇಕು, ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಬೇಕು, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನುರದ್ದು ಮಾಡಬೇಕು ಈ ಬಗ್ಗೆ ನೂತನ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು. ‌

ನಿಯೋಗದಲ್ಲಿ ರಾಜ್ಯ ರೈತ ಸಂಘದ ನಾರಾಯಣರೆಡ್ಡಿ, ಪ್ರಸನ್ನ ಕುಮಾರ್. ಶಿವಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ದೇವಕುಮಾರ, ಕಾನೂನು ಸಲಹೆಗಾರರಾದ ಕಿಸಾನ್ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿದೇವರಾಜ್
ಬರಡನಪುರ ನಾಗರಾಜ್ ಸಹಿತ ರೈತ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed