ಅರಣ್ಯ ಪ್ರದೇಶಗಳಲ್ಲಿ ಸಫಾರಿ ಆರಂಭ ನಿರ್ಧಾರಕ್ಕೆ ಕುರುಬೂರು ಶಾಂತಕುಮಾರ್ ಖಂಡನೆ

0
kuruburu-shanthakumar-300x226

ಬೆಂಗಳೂರು: ಅರಣ್ಯ ಪ್ರದೇಶಗಳಲ್ಲಿ ಸಫಾರಿ ಆರಂಭಿಸಲು ಸರ್ಕಾರ ನೀಡಿರುವ ಅನುಮತಿಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬಂಡವಾಳಶಾಹಿ ರೆಸಾರ್ಟ್ ಮಾಲೀಕರ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘಟನೆ ಆರೋಪಿಸಿದೆ.

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಪ್ರಕಟಣೆಯಲ್ಲಿ, “ಅರಣ್ಯದ ಅಂಚಿನಲ್ಲಿ ವಾಸಿಸುವ ಗ್ರಾಮಗಳ ರೈತರ ಕಷ್ಟ ಅರಿಯದೆ, ಕಾಡು ಪ್ರಾಣಿಗಳ ದಾಳಿಯಿಂದಾಗುತ್ತಿರುವ ಪ್ರಾಣಹಾನಿ ಹಾಗೂ ಬೆಳೆ ನಷ್ಟವನ್ನು ಲೆಕ್ಕಿಸದೆ ಸರ್ಕಾರ ಸಫಾರಿಗೆ ಅನುಮತಿ ನೀಡಿದೆ. ಈ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು. ಇಲ್ಲದಿದ್ದರೆ ರೈತ ಸಂಘಟನೆಗಳು ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.

ಸಫಾರಿ ಕಾರ್ಯಾಚರಣೆಗಳಿಂದ ಕಾಡು ಪ್ರಾಣಿಗಳು ಭಯಭೀತಗೊಂಡು ಕಾಡಿನ ಹೊರಗೆ ಬರುತ್ತಿವೆ. ಇದರಿಂದ ಮನುಷ್ಯರ ಮೇಲೆ ದಾಳಿ ಹಾಗೂ ಬೆಳೆ ಹಾನಿ ಪ್ರಕರಣಗಳು ಹೆಚ್ಚುತ್ತಿವೆ ಎಂಬುದು ಸರ್ಕಾರಕ್ಕೂ ತಿಳಿದಿದೆ. ಆದರೂ ಆದಾಯದ ಲೆಕ್ಕಾಚಾರಕ್ಕೆ ಮಣಿದು ಅನುಮತಿ ನೀಡಿರುವುದು ಖಂಡನೀಯ ಎಂದು ಅವರು ಆರೋಪಿಸಿದರು.

ಪ್ರಾಣಿಗಳ ಸಂಖ್ಯೆ ಏರಿಕೆಯಾಗಿದ್ದು, ಕಾಡು ಪ್ರದೇಶ ಕಡಿಮೆಯಾಗುತ್ತಿದೆ ಎಂಬುದನ್ನು ಸರ್ಕಾರವೇ ಹೇಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಣಿಗಳ ಸ್ವಾಭಾವಿಕ ಚಲನವಲನಕ್ಕೆ ಅಡ್ಡಿಯಾಗುವ ಕ್ರಮಗಳನ್ನು ಕೈಗೊಳ್ಳುವುದು ಸರಿಯಲ್ಲ. ಸರ್ಕಾರಕ್ಕೆ ಆದಾಯಕ್ಕಿಂತ ಜನರ ಬದುಕು ಮುಖ್ಯವಾಗಿರಬೇಕು ಎಂದು ಅವರು ಆಗ್ರಹಿಸಿದರು.

ಅರಣ್ಯ ಸಚಿವರು ಯಾವುದೇ ಒತ್ತಡಕ್ಕೆ ಮಣಿಯದೆ ಸಫಾರಿ ಆರಂಭದ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಶಾಂತಕುಮಾರ್ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You may have missed