ಪ್ರಯಾಣಿಕರನ್ನು ಹೊತ್ತು ಸಾಗಲಿದೆ KARTC ‘ಪಲ್ಲಕ್ಕಿ’: ಇನ್ನು ಮುಂದೆ ನಿತ್ಯವೂ ‘ಪಲ್ಲಕ್ಕಿ ಉತ್ಸವ’

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ರಾಜ್ಯದ ಜನರನ್ನು ಇನ್ನು ಮುಂದೆ ಪಲ್ಲಕಿಯಲ್ಲಿ ಹೊತ್ತು ಸಾಗಲಿದೆ. ಐರಾವತ, ಅಂಬಾರಿ ಇತ್ಯಾದ ಪೌರಾಣಿಕ ಹೆಸರುಗಳ ಸ್ಪರ್ಶದೊಂದಿಗೆ ಇಡೀ ದೇಶದ ಗಮನ ಕೇಂದ್ರೀಕರಿರುವ KSRTC ಇದೀಗ ಪ್ರಯಾಣಿಕರಿಗೆ ದೇವರ ಸ್ಥಾನ ನೀಡಿದೆಯೇ? ಎಂದು ಪ್ರಶ್ನಿಸಬಹುದು. ಒಂಥರಾ ಅದೇ ರೀತಿಯ ನಡೆ ರಾಜ್ಯದ ಹೆಮ್ಮೆಯ ಸಾರಿಗೆ ಸಂಸ್ಥೆಯದ್ದು.

‘ಪಲ್ಲಕಿ’ ಎಂದರೆ ದೇವರನ್ನು ಹೊತ್ತು ಸಾಗುವಂಥದ್ದು. ರಾಜ್ಯದ ಸಾರಿಗೆ ಇತಿಹಾಸದಲ್ಲಿ ಕೆಎಸ್ಸಾರ್ಟಿಸಿ ತನ್ನ ಪ್ರಯಾಣಿಕರಿಗೆ ಹೆಚ್ಚಿನ ಗೌರವ ನೀಡುವ ವ್ಯವಸ್ಥೆ ರೂಪಿಸಿದೆ. ಹೊಸದಾಗಿ ಐಷಾರಾಮಿ ಬಸ್ ಸೇವೆ ಆರಂಭಿಸಿರುವ ನಿಗಮವು ಇದೀಗ ‘ಪಲ್ಲಕಿ’ ಎಂಬ ಹೊಸ ಬ್ರಾಂಡ್ ಮೂಲಕ ಸೇವೆಯನ್ನು ಹೊಸ ಮಜಲಿಗೆ ಕೊಂಡೊಯ್ಯಲು ಸಜ್ಜಾಗಿದೆ.

ಏನಿದು ‘ಪಲ್ಲಕ್ಕಿ’?

ಈವರೆಗೂ ರಾಜಹಂಸ. ಐರಾವತ, ಅಂಬಾರಿ, ಅಂಬಾರಿ ಉತ್ಸವ, ಇತ್ಯಾದಿ ಪುರಾಣ ಕಥೆಗಳಲ್ಲಿ ಕಂಡುಬರುವ ಹೆಸರುಗಳಲ್ಲಿ ಸಾರಿಗೆ ಸೇವೆ ನೀಡಲಾಗುತ್ತಿತ್ತು. ಈ ನಡುವೆ ನಾನ್ ಎಸಿ ಸ್ಲೀಪರ್ ಬಸ್’ಗಳಿಗೆ ಯಾವುದೇ ವಿಶೇಷ ಹೆಸರನ್ನು ಇಟ್ಟಿರಲಿಲ್ಲ. ಹಾಗಾಗಿ ಈ ಬಾರಿ ಹೊಸ ಐಷಾರಾಮಿ ಸ್ಲೀಪರ್ ಬಸ್ಸುಗಳಿಗೆ ‘ಪಲ್ಲಕ್ಕಿ’ ಹೆಸರಿನಲ್ಲಿ ಹೊಸ ಬ್ರಾಂಡ್ ಸೃಷ್ಟಿಸಲಾಗಿದೆ. ಇದು ಸ್ವತಃ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರದ್ದೇ ಪರಿಕಲ್ಪನೆಯಂತೆ. ಈ ‘ಪಲ್ಲಕ್ಕಿ ಉತ್ಸವ’ಕ್ಕೆ ಶನಿವಾರ ಚಾಲನೆ ಸಿಗಲಿದೆ.

ರಾಜ್ಯದಲ್ಲಿ ಮಹತ್ವಾಕಾಂಕ್ಷಿಯ ‘ಶಕ್ತಿ’ ಯೋಜನೆ ಜಾರಿಯಾದ ಬಳಿಕ KSRTC ತನ್ನ ಬಸ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡುತ್ತಿದೆ. ಪ್ರಸ್ತುತ 100 ಹೊಸ ಬಸ್‌ಗಳನ್ನು ಖರೀದಿ ಮಾಡಿದೆ. ಇನ್ನು ಇದರ ಜತೆಗೆ 40 ಹೊಸ ಐಶಾರಾಮಿ ಬಸ್‌ಗಳನ್ನು ಕೂಡ ರಸ್ತೆಗಿಳಿಸುತ್ತಿದೆ. ಈ ಐಷಾರಾಮಿ ಬಸ್ಸುಗಳಾದ ”ಪಲ್ಲಕ್ಕಿ ಉತ್ಸವ’ ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿದೆ. ಈ ನೂತನ ಬಸ್‌ಗಳಿಗೆ ಅಕ್ಟೋಬರ್‌ 7 ರಂದು ವಿಧಾನಸೌಧದ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಮಂತ್ರಿಗಳು ಅಧಿಕಾರಿಗಳು ​​​ಚಾಲನೆ ನೀಡಲಿದ್ದಾರೆ.

‘ಪಲ್ಲಕ್ಕಿ’ ವಿಶೇಷತೆಗಳು ಏನು ಗೊತ್ತಾ?

  • ಇದು ನಾನ್‌ ಎಸಿ ಸ್ಪೀಪರ್‌ ಬಸ್‌.​

  • ಅತ್ಯಂತ ಆಕರ್ಷಕ ಹೊರಾಂಗಣ ಹೊಂದಿದೆ.

  • ಒಳಾಂಗಣ ವಿನ್ಯಾಸವೂ ವೈಶಿಷ್ಟವಾಗಿದೆ.

  • ಈ ‘ಪಲ್ಲಕ್ಕಿ’ 28 ಆಸನಗಳ ಸಾಮರ್ಥ್ಯ ಹೊಂದಿದೆ.

  • ಇತರ ಬಸ್ಸುಗಳಿಗಿಂತ ಹೆಚ್ಚು ಪ್ರಯಾಣಿಕ ಸ್ನೇಹಿಯಾಗಿದೆ.

  • ‘ಪಲ್ಲಕ್ಕಿ’ಯನ್ನು ಅಶೋಕ್‌ ಲೇಲ್ಯಾಂಡ್‌ ಕಂಪನಿ ನಿರ್ಮಿಸಿರುವುದು.

  • ಮೊದಲ ಹಂತದಲ್ಲಿ 40 ‘ಪಲ್ಲಕ್ಕಿ’ ಬಸ್‌ಗಳು ರಸ್ತೆಗಿಳಿಯಲಿವೆ.

  • ಈ ಪೈಕಿ 30 ಬಸ್‌ಗಳು ರಾಜ್ಯದೊಳಗೆ ಸಂಚರಿಸಲಿವೆ

  • ಇನ್ನುಳಿದ 10 ಬಸ್‌ಗಳು ಅಂತಾರಾಜ್ಯ ಸೇವೆಗೆ ಬಳಕೆಯಾಗಲಿವೆ.

  • ಮೊದಲ ಹಂತದಲ್ಲಿ ಬೆಂಗಳೂರು-ಮೈಸೂರು, ಬೆಂಗಳೂರು-ಮಂಗಳೂರು, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ದಾವಣಗೆರೆ, ಬೆಂಗಳೂರು-ವಿಜಯಪುರ, ಬೆಂಗಳೂರು-ಹೊಸಪೇಟೆ ಮಾರ್ಗದಲ್ಲಿ ಈ ಬಸ್‌ಗಳ ಓಡಾಟಕ್ಕೆ ತಯಾರಿ ನಡೆದಿದೆ.

You may have missed