ಬೆಂಗಳೂರು: ಸದಾ ಒಂದಿಲ್ಲೊಂದು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿರುವ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿ ಇಂದು ಅನನ್ಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಸಮಾಜಕ್ಕೆ ವನಿತಾ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟ ಸಾಧಕಿಯರನ್ನು ಗೌರವಿಸಿದ ಅಪೂರ್ವ ಕ್ಷಣ ಕುತೂಹಲದ ಕೇಂದ್ರಬಿಂದುವಾಯಿತು.

ಬೆಂಗಳೂರಿನ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ  ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ 2023’ ಸಮಾರಂಭ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ನಾರಿ ಶಕ್ತಿ ಪ್ರಶಸ್ತಿ ಪುರಸ್ಕೃತ ಶೋಭಾ ಗಸ್ತಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಾಮಾಜಿಕ ಕಾಳಜಿ, ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಶೋಭಾರವರು ತಮ್ಮನ್ನು ತೊಡಗಿಸಿಕೊಂಡಿದ್ದು ಅವರ ಈ ಸಾಮಾಜಿಕ ಕೈಂಕರ್ಯವನ್ನು ಕೆಎಸ್ಸಾರ್ಟಿಸಿ ವತಿಯಿಂದ ಗೌರವಿಸಲಾಯಿತು. 

 ನಿಗಮದ ವತಿಯಿಂದ ಶ್ರೀಮತಿ ಶೋಭಾ ಗಸ್ತಿರವರಿಗೆ ನೆನಪಿನ‌ ಕಾಣಿಕೆ, ರೂ.20,000 ಗೌರವ ಧನದ ಚೆಕ್ ನೀಡಿ ಗೌರವಿಸಲಾಯಿತು.

ಮಹಿಳಾ ಸಬಲೀಕರಣಕ್ಕಾಗಿ ಶೋಭಾ ಅವರು ಶ್ರಮಿಸಿರುವುದನ್ನು ಸ್ಮರಿಸಿದ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ಸಮಾಜದಲ್ಲಿರುವ ದೇವದಾಸಿ ಕರಾಳ ಪದ್ಧತಿಯ ವಿರುದ್ಧ ಹೋರಾಡುತ್ತಿರುವ ಇವರು ನಮ್ಮ ನಿಗಮದ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ಮಹಿಳಾ ಸಿಬ್ಬಂದಿಗೆ ಪ್ರೇರಣೆಯಾಗಿದ್ದಾರೆ. ಮಹಿಳೆಯರಿಗೆ ಶಿಕ್ಷಣವೇ ಆಸ್ತಿ ಮತ್ತು ಶಕ್ತಿ ಎಂದರು.

ನಿಗಮದ ವಿವಿಧ ಹುದ್ದೆಗಳಲ್ಲಿ ಒಟ್ಟಾರೆ 2821 ಮಹಿಳಾ ಉದ್ಯೋಗಿಗಳು, ಪುರುಷ ಕಾರ್ಮಿಕರಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದು, ನಿಗಮವು ಎಲ್ಲಾ ರೀತಿಯಲ್ಲಿಯೂ ಅವರನ್ನು ಗೌರವಿಸಿ ಪ್ರೋತ್ಸಾಹಿಸುತ್ತಿರುವ ಮತ್ತು ಅವರ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು.

ಶ್ರೀಮತಿ ಶೋಭಾ ಗಸ್ತಿ ರವರು ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಅಗತ್ಯ, ಸರ್ಕಾರಗಳು ಹತ್ತು‌ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ನಮ್ಮಂತಹ ಅನೇಕರಿಗೆ ದೇವದಾಸಿ ಪದ್ಧತಿಯಿಂದ ಹೊರಬರಲು ಸಹಾಯ ಮಾಡುತ್ತಿವೆ. ಸಮಾಜವು‌ ಕೂಡ ಹೆಣ್ಣುಮಕ್ಕಳನ್ನು ಗೌರವಿಸಬೇಕು. 1994 ರಿಂದ ತಾವು ಈ ಪದ್ಧತಿಯ ವಿರುದ್ಧ ಹೋರಾಡುತ್ತಾ ನಮ್ಮ‌ ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಎಲ್ಲರಂತೆ ಬದುಕಲು ಮಾರ್ಗದರ್ಶನ, ಧೈರ್ಯ ,ಹಾಗೂ ಸಹಕಾರ ನೀಡುತ್ತಿದ್ದೇನೆ. ಬೆಳಗಾವಿಯಿಂದ ನನ್ನನ್ನು ಇಲ್ಲಿಗೆ ಆಹ್ವಾನಿಸಿ, ಗೌರವಿಸಿದ್ದು ನಮ್ಮಂತಹ ಹಲವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸಾರಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗಳು ಸಹ ಅಭಿನಂದನಾರ್ಹರು ಎಂದು ತಿಳಿಸಿದರು.

ಇಂದು ನಿಗಮದ 17 ವಿಭಾಗಗಳಲ್ಲಿ ಉತ್ತಮ ಕಾರ್ಯ ಸಾಧನೆ ತೋರಿದ ನಿರ್ವಾಹಕಿಯರು, ತಾಂತ್ರಿಕ ಸಿಬ್ಬಂದಿಗಳು ಹಾಗೂ ಭದ್ರತಾ ಸಿಬ್ಬಂದಿಗಳ ಪೈಕಿ ಒಟ್ಟು 42 ಮಹಿಳಾ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೆಎಸ್ಸಾರ್ಟಿಸಿ ಸಿಬ್ಬಂದಿ ಮತ್ತು ಜಾಗೃತ ವಿಭಾಗದ ನಿರ್ದೇಶಕರಾದ ಪ್ರಶಾಂತ್ ಕುಮಾರ್ ಮಿಶ್ರ ಸಹಿತ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *

You may have missed