ಕರ್ನಾಟಕ ಬಂದ್.. ವಕೀಲರಿಗೆ ಬಾರ್ ಅಸೋಸಿಯೇಷನ್ ನೀಡಿದ ಸಂದೇಶ ಹೀಗಿದೆ

ಬೆಂಗಳೂರು: ಕಾವೇರಿ ಕಿಚ್ಚು ಕನ್ನಡಪರ ಸಂಘಟನೆಗಳನ್ನು ರೊಚ್ಚಿಗೆಬ್ಬಿಸಿದೆ. ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಕೆಲವು ದಿನಗಳಿಂದ ನಡೆಯುತ್ತಿರುವ ಹೋರಾಟ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ.

ತಮಿಳುನಾಡಿಗೆ ನೀರು ಹರಿಸುತ್ತಿರುವ ಕ್ರಮವನ್ನು ಪ್ರತಿಭಟಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ‘ಅಖಂಡ ಕರ್ನಾಟಕ ಬಂದ್‌’ಗೆ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ. ಇದೇ ವೇಳೆ ವಕೀಲರ ಸಂಘವೂ ಬಂದ್ ಬೆಂಬಲಿಸಿದೆ. ನಾಡು-ನುಡಿ ವಿಚಾರದಲ್ಲಿನ ಹೋರಾಟಗಳಲ್ಲಿ ಸಹಭಾಗಿಯಾಗುತ್ತಿರುವ ಬೆಂಗಳೂರು ವಕೀಲರ ಸಂಘ ಈ ಬಾರಿಯೂ ಕನ್ನಡ ಸಂಘಟನೆಗಳ ಜೊತೆಗೆ ನಿಂತಿದೆ.

ಇದೇ ವೇಳೆ, ವಕೀಲರ ಸಮೂಹಕ್ಕೆ ಬೆಂಗಳೂರು ವಕೀಲರ ಸಂಘ ಕರೆ ನೀಡಿದ್ದು, ಹೋರಾಟದಲ್ಲಿ ಭಾಗಿಯಾಗಬೇಕೆಂದು ಸಹೋದ್ಯೋಗಿಗಳಿಗೆ ಮನವಿ ಮಾಡಿದೆ. ವಕೀಲರು ನ್ಯಾಯಾಲಯಕ್ಕೆ ಹಾಜರಾಗಲು ಮುಕ್ತರಾಗಿದ್ದಾರೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬ ರೆಡ್ಡಿ ತಿಳಿಸಿದ್ದಾರೆ.

ವಕೀಲರ ಸಂಘದ ಸಂದೇಶ ಹೀಗಿದೆ:

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬ ರೆಡ್ಡಿ, ಕಾರ್ಯದರ್ಶಿ ಟಿ.ಜಿ.ರವಿ, ಖಜಾಂಚಿ ಎಂ.ಟಿ. ಹರೀಶ್ ಅವರು ಜಂಟಿ ಮಾಧ್ಯಮ ಹೇಳಿಕೆ ಮೂಲಕ ವಕೀಲರಿಗೆ ಸಂದೇಶ ರವಾನಿಸಿದ್ದಾರೆ.‌ ಕರ್ನಾಟಕ ಬಂದ್‌ ಸಂದರ್ಭದಲ್ಲಿ ವಕೀಲರು ಕೋರ್ಟ್‌ಗೆ ಹಾಜರಾಗದ ಕಾರಣದಿಂದಾಗಿ ಪ್ರಕರಣಗಳಲ್ಲಿ ಯಾವುದೇ ರೀತಿ ಅನಾನುಕೂಲವಾಗಬಾರದು ಎಂಬ ಬೆಂಗಳೂರು ವಕೀಲರ ಸಂಘದ ಮನವಿಗೆ ಸ್ಪಂಧಿಸುವುದಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಇತರ ನ್ಯಾಯಾಧೀಶರಿಗೆ ಸೂಚಿಸಿದ್ದಾರೆ. ಇದೇ ರೀತಿಯ ಸೂಚನೆ ಎಲ್ಲಾ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಿಗೆ ಮತ್ತು ಆಯಾ ಜಿಲ್ಲೆಗಳ ನ್ಯಾಯಾಧೀಶರಿಗೆ ರವಾನೆಯಾಗಿದೆ ಎಂದು ಮಾಹಿತಿ‌ ಹಂಚಿಕೊಂಡಿದ್ದಾರೆ.

ಬಂದ್‌ ಬೆಂಬಲಿಸಲು ವಕೀಲರ ಸಂಘ ಕರೆ ನೀಡಿದೆ. ಆದರೆ ವಕೀಲರು ನ್ಯಾಯಾಲಯಕ್ಕೆ ಹಾಜರಾಗಲು ಮುಕ್ತರಾಗಿದ್ದಾರೆ.

You may have missed