ಚೀನಾ ಗಡಿ ತಂಟೆ: ಅಮೆರಿಕಾ ಮಧ್ಯಸ್ಥಿಕೆ ಬೇಡ ಎಂದ ಭಾರತ

ವಾಷಿಂಗ್ಟನ್: ಚೀನಾದೊಂದಿಗಿನ ಗಡಿ ಘರ್ಷಣೆಯನ್ನು ಕೊನೆಗೊಳಿಸಲು ಮಧ್ಯಸ್ಥಿಕೆ ವಹಿಸಲು “ಸಹಾಯ” ಮಾಡುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾಪವನ್ನು ಭಾರತ ತಿರಸ್ಕರಿಸಿದೆ.
“ನಮ್ಮ ಯಾವುದೇ ನೆರೆಹೊರೆಯವರೊಂದಿಗೆ ನಮಗೆ ಯಾವುದೇ ಸಮಸ್ಯೆಗಳಿದ್ದರೂ, ಈ ಸಮಸ್ಯೆಗಳನ್ನು ನಿಭಾಯಿಸಲು ನಾವು ಯಾವಾಗಲೂ ದ್ವಿಪಕ್ಷೀಯ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ” ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಅಮೆರಿಕಾದ ಪ್ರಸ್ತಾಪಕ್ಕೆ ಸ್ಪಷ್ಟ ಉತ್ತರ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕ ಅಧ್ಯಕ್ಷ ಟ್ರಂಪ್ ಅವರ ಭೇಟಿ ಸಂದರ್ಭದಲ್ಲಿ ಭಾರತದ ಈ ದಿಟ್ಟ ಉತ್ತರ ಚೀನಾ ಜೊತೆಗಿನ ಗಡಿ ವಿಚಾರ ಕುರಿತ ನಿಲುವನ್ನು ಸ್ಪಷ್ಟಪಡಿಸಿದಂತಾಗಿದೆ.
ಮಾತುಕತೆಗಳ ನಂತರ ಪ್ರಧಾನಿಯೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಟ್ರಂಪ್, “ನಾನು ಭಾರತವನ್ನು ನೋಡುತ್ತೇನೆ, ಗಡಿಯಲ್ಲಿನ ಘರ್ಷಣೆಗಳು ಸಾಕಷ್ಟು ಕೆಟ್ಟದಾಗಿವೆ ಮತ್ತು ಅವು ಮುಂದುವರಿಯುತ್ತವೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದರು. “ಸಹಾಯ ಮಾಡಲು ಸಾಧ್ಯವಾದರೆ, ಸಹಾಯ ಮಾಡಲು ಇಷ್ಟಪಡುತ್ತೇನೆ. ಏಕೆಂದರೆ ಬಹಳ ಸಮಯದಿಂದ ಇರುವ ಗಡಿ ತಂಟೆ ಸಾಕಷ್ಟು ಹಿಂಸಾತ್ಮಕವಾಗಿದೆ” ಎಂದಿದ್ದರು.