ಹೆಬ್ಬಾಳ KIADB ಭೂಸ್ವಾಧೀನ ರದ್ದು, ಉದ್ಯಮಿ ದಯಾನಂದ್ ಪೈಗೆ ಭಾರೀ ದಂಡ, ಸಿಬಿಐ ತನಿಖೆಗೆ ಹೈಕೋರ್ಟ್ ನಿರ್ದೇಶನ

0
high Court

ಬೆಂಗಳೂರು: ಕೈಗಾರಿಕೆ ಹೆಸರಲ್ಲಿ ಭೂಸವಾಧೀನ ಮಾಡಿಸಿ ವೈಯಕ್ತಿಕ ಬ್ಯುಸಿನೆಸ್ ನಡೆಸುವ ರಿಯಲ್ ಎಸ್ಟೇಟ್ ಉದ್ಯಮಿ ದಯಾನಂದ್ ಪೈ ಪ್ರಯತ್ನಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಮಹತ್ವದ ಆದೇಶವೊಂದರಲ್ಲಿ ಬೆಂಗಳೂರಿನ ಹೆಬ್ಬಾಳ ಬಳಿ ಲೇಕ್ ವ್ಯೂ ಪ್ರವಾಸೋದ್ಯಮ ನಿಗಮಕ್ಕೆ ನೂರಾರು ಕೋಟಿ ಬೆಲೆಬಾಳುವ ಜಾಮೀನು ಸ್ವಾಧೀನ ಅಧಿಸೂಚನೆಯನ್ನೇ ಹೈಕೋರ್ಟ್ ರದ್ದುಪಡಿಸಿದೆ. ಅಷ್ಟೇ ಅಲ್ಲ ಉದ್ಯಮಿ ದಯಾನಂದ್ ಪೈ ಅವರಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ದಂಡ ವಿಧಿಸಿದ್ದಲ್ಲದೆ, ಸಿಬಿಐ ತನಿಖೆಗೂ ಆದೇಶಿಸಿ ಶುಕ್ರವಾರ ತೀರ್ಪು ಪ್ರಕಟಿಸಿದೆ.

ಹೆಬ್ಬಾಳದಲ್ಲಿ ಸ್ಥಳೀಯರ ಆಕ್ಷೇಪದ ನಡುವೆಯೂ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗಾಗಿ 63.33 ಎಕರೆ ಭೂಮಿಯನ್ನು ಸ್ವಾಧೀನ ಕುರಿತು KIADBಯು 2002ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಅದೇ ಜಮೀನನ್ನು ಬಿಡಿಡಿಎಯು 2004ರಲ್ಲಿ ಅರ್ಕಾವತಿ ಲೇಔಟ್ ನಿರ್ಮಾಣಕ್ಕೂ ಅಧಿಸೂಚನೆ ಹೊರಡಿಸಿದೆ. ಅದಾಗಿಯೂ KIADBಯು ಕಾಯ್ದೆಯ ಸೆಕ್ಷನ್ 28 (ಎ) ರ ಅಡಿಯಲ್ಲಿ 63.33 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಈ ಪೈಕಿ ಹೆಬ್ಬಾಳದ ಅಮಾನಿಖಾನೆ ಬಿಟೆಲಿ ಬಳಿಯ 6 ಗುಂಟೆ ಜಾಗ ಸೇರಿದಂತೆ 37 ಗುಂಟೆ ಅಳತೆಯ ಜಮೀನು ಮಾಲೀಕರು ಈ ಅಧಿಸೂಚನೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆಹೋದರು. ಆರಂಭದಲ್ಲಿ ಅರ್ಜಿ ವಜಾ ಆಯಿತಾದರೂ, ನಂತರ ಹಿರಿಯ ನ್ಯಾಯವಾದಿ ಅಶ್ವಥನಾರಾಯಣ ಹಾಗೂ ವಕೀಲರಾದ ಎಸ್.ಎ.ಸುಧೀಂದ್ರ ಎಲ್.ನರಸಿಂಹ ಮೂರ್ತಿ ಅವರನ್ನೊಳಗೊಂಡ Sadali Associates ಕಾನೂನು ತಂಡದ ಸಮರ್ಥ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ತಾರಾ ವಿತಸ್ತಾ ಗಂಜು ಅವರನ್ನೊಳಗೊಂಡ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ಹಾಗೂ ಉದ್ಯಮಿ ದಯಾನಂದ್ ಪೈ ಮಾಲೀಕತ್ವದ ‘ಲೇಕ್ ವ್ಯೂ ಪ್ರವಾಸೋದ್ಯಮ ನಿಗಮ’ಕ್ಕೆ ಆಘಾತ ನೀಡಿದೆ.

ರೆಸಾರ್ಟ್‌ಗಳು, ಫೈವ್ ಸ್ಟಾರ್ ಹೋಟೆಲ್‌ಗಳು ಮತ್ತು ಇತರ ಮನರಂಜನಾ ಸೌಲಭ್ಯಗಳನ್ನು ಒಳಗೊಂಡಿರುವ “ಯೂನಿಕೇರ್ ಟೂರಿಸ್ಟ್ ಸೆಂಟರ್” ಸ್ಥಾಪನೆಗಾಗಿ ‘ಲೇಕ್ ವ್ಯೂ ಟೂರಿಸಂ ಕಾರ್ಪೊರೇಷನ್’ ವ್ಯವಹಾರಕ್ಕೆ ಅನುಕೂಲ ಮಾಡಿಕೊಡಲು KIADBಯು ನಿಯಮ ಉಲ್ಲಂಘಿಸಿ ಭೂಸ್ವಾಧೀನ ಪಡಿಸಿದೆ ಎಂದು ಭೂ ಮಾಲೀಕರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ‘KIADBಯು ಕೈಗಾರಿಕೆ ಉದ್ದೇಶಗಳಿಗೆ ಸಾರ್ವಜನಿಕರ ಜಮೀನನ್ನು ಸ್ವಾಧೀನಪಡಿಸಬೇಕೇ ಹೊರತು, ಪ್ರಭಾವಿಗಳ ವಯ್ಯಕ್ತಿಕ ಉದ್ದೇಶಗಳಿಗೆ ಅಲ್ಲ’ ಎಂದು ವಕೀಲರಾದ ಅಶ್ವಥನಾರಾಯಣ ಸಮರ್ಥ ವಾದ ಮಂಡಿಸಿ ವಿಭಾಗೀಯ ಪೀಠದ ಗಮನಸೆಳೆದಿದ್ದಾರೆ. ಈ ವಾದವನ್ನು ನ್ಯಾಯಪೀಠ ಪುರಸ್ಕರಿಸಿದೆ.

‘ಲೇಕ್ ವ್ಯೂ ಟೂರಿಸಂ ಕಾರ್ಪೊರೇಷನ್’ ಮಾರಾಟ ಒಪ್ಪಂದ ಮೂಲಕ ಭೂಮಾಲೀಕರಿಂದ 33 ಎಕರೆಗಳನ್ನು ಖರೀದಿಸಿ, ತಮ್ಮ ಯೋಜನೆಗೆ ಇನ್ನೂ 37 ಎಕರೆ ಜಮೀನಿಗೆ ಬೇಡಿಕೆ ಇಟ್ಟಿತ್ತು. ಸಾರ್ವಜನಿಕ ಉದ್ದೇಶಗಳನ್ನು ಪೂರೈಸುವ ನೆಪದಲ್ಲಿ ಖಾಸಗಿ ವ್ಯಕ್ತಿಗೆ “ಎಮಿನೆಂಟ್ ಡೊಮೇನ್” ಸೇವೆ ಒದಗಿಸಲು ರಾಜ್ಯ ಸರ್ಕಾರವೂ ಮುಂದಾಯಿತು. ‘ಲೇಕ್ ವ್ಯೂ ಟೂರಿಸಂ ಕಾರ್ಪೊರೇಷನ್’ ಮಾಲೀಕರಾಗಿರುವ ದಯಾನಂದ ಪೈ ಅವರಂತಹ ದೊಡ್ಡ ಉದ್ಯಮಿಗಳ ಒತ್ತಡಕ್ಕೆ ಮಣಿದು KIADBಯು ಪ್ರತಿ ಎಕರೆಗೆ 15 ಲಕ್ಷ ರೂಪಾಯಿ ದರದಲ್ಲಿ ಸ್ವಾಧೀನಪಡಿಸಿಕೊಳ್ಳಲು ಕ್ರಮವಹಿಸಿತ್ತು. ಈ ಬಗ್ಗೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ ವಕೀಲರಾದ ಅಶ್ವಥನಾರಾಯಣ ಅವರು, “KIADB ಯು ಸಾರ್ವಜನಿಕರ ಆಶೋತ್ತರಗಳಿಗೆ ತಕ್ಕಂತೆಯೇ ಕೆಲಸ ಮಾಡಬೇಕೆ ಹೊರತು ಶ್ರೀಮಂತರ, ಪ್ರಭಾವಿಗಳ ಪರವಾಗಿ ನಿಲ್ಲುವುದು ಸರಿಯಲ್ಲ. ‘ಎಮಿನೆಂಟ್ ಡೊಮೇನ್’ ಸೇವೆಗಳನ್ನು ರಾಜ್ಯ ಸರ್ಕಾರವು ಒಪ್ಪವುದು ಸರಿಯಲ್ಲ” ಎಂದು ವಾದಿಸಿದರು.

ಲೇಕ್ ವ್ಯೂ ಪ್ರವಾಸೋದ್ಯಮ ನಿಗಮವು ನೋಂದಾಯಿಸಲ್ಪಟ್ಟಿಲ್ಲ, ಕಾನೂನಿನ ದೃಷ್ಟಿಯಲ್ಲಿ ಒಂದು ಸಂಸ್ಥೆಯಲ್ಲ. ಹೀಗಿರುವಾಗ ಖಾಸಗಿ ವ್ಯಕ್ತಿಯ ಪರವಾಗಿ ಸರ್ಕಾರ ನಿಂತಾಗುತ್ತದೆ. ಅಷ್ಟೇ ಅಲ್ಲ, ಫೈವ್ ಸ್ಟಾರ್ ಹೋಟೆಲ್ ಸ್ಥಾಪಿಸುವ ವಾಣಿಜ್ಯ ಉದ್ದೇಶಗಳಿಗಾಗಿ ಭೂಸ್ವಾಧೀನ ಪಡಿಸಿ, ರಾಜ್ಯ ಸರ್ಕಾರವೂ ಕೂಡ ರಿಯಲ್ ಎಸ್ಟೇಟ್ ಪರವಾಗಿ ವರ್ತಿಸಿದೆ ಎಂದವರು ವಾದ ಮುಂದಿಟ್ಟರು.

ಸುದೀರ್ಘ ವಾದವನ್ನು ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠವು, ಶುಕ್ರವಾರ ( ಏಪ್ರಿಲ್ 10) ಮಹತ್ವದ ತೀರ್ಪನ್ನು ಪ್ರಕಟಿಸಿ, ಹೆಬ್ಬಾಳ ಬಳಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನಕ್ಕೆ KIADB ಹೊರಡಿಸಿರುವ ಅಧಿಸೂಚನೆಯನ್ನೇ ರದ್ದುಗೊಳಿಸಿದೆ. ಜೊತೆಗೆ, ದಯಾನಂದ್ ಪೈ ಮಾಲೀಕತ್ವದ ಉದ್ಯಮಿ ಲೇಕ್ ವ್ಯೂ ಟೂರಿಸಂ ಕಾರ್ಪೊರೇಷನ್ ಸಂಸ್ಥೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಈ ಭೂ ಅಕ್ರಮ ಬಗ್ಗೆ ಸಿಬಿಐ ತನಿಖೆ ಬಗ್ಗೆ ಪರಿಶೀಲನೆಗೂ ನಿರ್ದೇಶನ ನೀಡಿದೆ.

ನ್ಯಾಯ, ನ್ಯಾಯಾಲಯ ಗೆದ್ದಿದೆ: ಹಲವಾರು ಅಕ್ರಮ ಆರೋಪಗಳಿಗೆ ವೇದಿಕೆಯಾಗಿ ನಿಂತಿರುವ KIADBಗೆ ಹೆಬ್ಬಾಳ ಪ್ರಕರಣದಲ್ಲಿ ತಕ್ಕ ಪಾಠ ಕಲಿಸಿದೆ . ಅಧಿಸೂಚನೆಯನ್ನು ರದ್ದುಪಡಿಸಿದ್ದಷ್ಟೇ ಅಲ್ಲ, ಅಕ್ರಮ ನಡೆ ಕುರಿತು ಸಿಬಿಐ ತನಿಖೆಯ ಅಗತ್ಯ ಬಗ್ಗೆಯೂ ಪ್ರತಿಪಾದಿಸುವ ಮೂಲಕ ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ತಾರಾ ವಿತಸ್ತಾ ಗಂಜು ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು ‘ನ್ಯಾಯಾಂಗವು ನ್ಯಾಯದ ಪರವಾಗಿ ನಿಂತಿದೆ’ ಎಂಬುದನ್ನು ಸಾಬೀತು ಮಾಡಿದೆ ಎಂದು ಕಾನೂನು ಪಂಡಿತರು ವಿಶ್ಲೇಷಿಸಿದ್ದಾರೆ. ಈ ತೀರ್ಪಿನಿಂದ ನ್ಯಾಯಾಲಯದ ಮೇಲಿನ ಹೆಚ್ಚಾಗಿದೆ ಎಂದು ಹಿರಿಯ ವಕೀಲರು ಬಣ್ಣಿಸಿದ್ದಾರೆ.

Leave a Reply

Your email address will not be published. Required fields are marked *