ಖಾಸಗಿ ಹೈಟೆಕ್ ಸ್ಕೂಲ್’ಗಳನ್ನೂ ನಾಚಿಸುವಂತಿದೆ BTM ಲೇಔಟ್’ನ ಸರ್ಕಾರಿ ಶಾಲೆಗಳು..ಈ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಮಂಜುನಾಥ್ ಅವರ ಮನದಾಳದ ಮಾತು ಹೀಗಿದೆ…
ಜನಪ್ರತಿನಿಧಿಗಳಿಗೆ ಜನಸಾಮಾನ್ಯರ ಬಗ್ಗೆ ಇಚ್ಚಾಶಕ್ತಿ ಇದ್ದರೆ ಅಭಿವೃದ್ಧಿಶೀಲ ಕ್ಷೇತ್ರ ನಿರ್ಮಾಣ ಅಸಾಧ್ಯವಲ್ಲ ಎಂಬುದಕ್ಕೆ ಈ ಸರ್ಕಾರಿ ಶಾಲೆಗಳು ಉದಾಹರಣೆಯಂತಿದೆ.
ಖಾಸಗಿ ಹೈಟೆಕ್ ಶಾಲೆಗಳನ್ನು ನಾಚಿಸುವಂತಿರುವ BTM ಲೇಔಟ್‌ನ ಸರ್ಕಾರಿ ಶಾಲೆಗಳು.. ಈ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಮಂಜುನಾಥ್ ಅವರ ಮನದಾಳದ ಮಾತು ಹೀಗಿದೆ…
ರಾಜಧಾನಿ ಬೆಂಗಳೂರು ಸೆರಗಿನಲ್ಲಿರುವ BTM ಲೇಔಟ್’ನಲ್ಲಿರುವ ಸರ್ಕಾರಿ ಶಾಲೆಗಳು ಖಾಸಗಿ ಕಾರ್ಪೊರೇಟ್ ಹೈಟೆಕ್ ಶಾಲೆಗಳನ್ನು ನಾಚಿಸುವ ರೀತಿಯಲ್ಲಿ ಅಭಿವೃದ್ಧಿ ಕಂಡಿವೆ. ಪದಪುಂಜಗಳ ಆಕರ್ಷಣೆಗೆ ಸಾಕ್ಷಿಯಾಗುವ ‘ಶಿಕ್ಷಣ ಕಾಶಿ’ ಎಂದರೇನು? ಅದು ಎಲ್ಲಿದೆ ಎಂದು ಹೂಡುತ್ತಾ ಸಾಗಿದವರಿಗೆ ಈ ಶಾಲೆಗಳು ಸಿಗುತ್ತವೆ. ಇವು ‘ಕಾಶಿಗಿಂತಲೂ’ ಮೇಲ್ಪಂಕ್ತಿಯಲ್ಲಿದೆ ಎಂದು ಗೊತ್ತಾಗುತ್ತದೆ.
ತಾವರೆಕೆರೆ, ಕುವೆಂಪುನಗರ ಸುತ್ತಮುತ್ತಲ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದರೆ ಸಾಕು, ಹೊಸ ಪ್ರಪಂಚ ತೆರೆದುಕೊಂಡಂತೆ ಭಾಸವಾಗುತ್ತದೆ. ಆಕರ್ಷಕ ಕಟ್ಟಡ.. ಅದರೊಳಗೆ ವ್ಯವಸ್ಥಿತ ತರಗತಿಗಳು. ಶಿಸ್ತುಬದ್ಧ ವಿದ್ಯಾರ್ಥಿ ಸಮೂಹಕ್ಕೆ ಎಲ್ಲಿಲ್ಲದ ಪಾಠ-ಪ್ರವಚನ. ಯಾವುದೇ ಪಾಠಶಾಲೆಗಳಲ್ಲಿ ಸಿಗದ, ಗುರುಕುಲ ವೈಭವವೂ ಸಾಟಿ ಇಲ್ಲ ಎಂಬಂತೆ ಕಂಗೊಳಿಸುತ್ತಿದೆ ಈ ಶಾಲೆಯೊಂದರ ವಾತಾವರಣ.
ಸರ್ಕಾರಿ ಶಾಲೆ ಎಂದರೆ ಅಭಿವೃದ್ಧಿ ಮರೀಚಿಕೆ ಎಂಬ ವಾಸ್ತವ ವಾಕ್ಯಕ್ಕೆ ಅಪವಾದ ಎಂಬಂತೆ BTM ಲೇಔಟ್’ನಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಕಂಡುಬರುತ್ತದೆ. ಖಾಸಗಿ ಸಾಲೆಗಳಿಗೆ ಕಮ್ಮಿ ಇಲ್ಲ ಎಂಬಂತೆ ಈ ಸರ್ಕಾರಿ ಶಾಲೆಯಲ್ಲಿ Smart Class ಕಲ್ಪನೆಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳ ಕಲಿಕೆಗೆ ಹಿತವಾದ ಅನುಭವ ಸಿಗುವಂತಾಗಲು ಶುದ್ಧ ಗಾಳಿ-ಬೆಳಕು ಬರುವಂತೆ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾಗಿ Computers ಲ್ಯಾಬ್ ರೂಪಿತವಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಲ್ಲೂ ಲೋಪವಿಲ್ಲ, ಗ್ರಂಥಾಲಯವೂ ಗ್ರಂಥ ಭಂಡಾರದಿಂದ ಶ್ರೀಮಂತವಾಗಿದೆ. ಆಡಿಟೋರಿಯಂ, ಅಚ್ಚುಕಟ್ಟಾದ ಆಸನಗಳೂ ಅತ್ಯಾಧುನಿಕ. ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಯೂ ಗಮನಾರ್ಹ.
ಮಕ್ಕಳನ್ನು ಕ್ರೀಡಾ ಪ್ರತಿಭಾನ್ವಿತರನ್ನಾಗಿ ರೂಪಿಸಲು ಅನುಸರುಸಿತ್ತಿರುವ ವಿಧಾನವೂ ಸ್ಫೂರ್ತಿದಾಯಕ. ಅದಕ್ಕಾಗಿಯೇ ಸುಸಜ್ಜಿತ ಕ್ರೀಂಡಾಗಣ ವ್ಯವಸ್ಥೆ ಇದೆ. ಪ್ರಕೃತಿಯ ಮಡಿಳಿಗೆ ಸಿರಿವಂತಿಕೆ ತುಂಬುತ್ತಿರುವ ಹಸಿರು ಐಸಿರಿಯ ವಾತಾವರಣ ಕೂಡಾ ಎಲ್ಲರಿಗೂ ಮುದ ನೀಡುವಂತಿದೆ. ವಿದ್ಯಾರ್ಥಿಗಳ ಓದಿಗೆ ಪೂರಕವಾದಂತಹ ಕ್ರಮಗಳ ಜೊತೆ ಶೌಚಾಲಯ ವ್ಯವಸ್ಥೆ, ಶಾಲೆಗಳ ನಿರ್ವಹಣೆ ಕಾರ್ಯಕೂಡಾ ಮಾದರಿಯಾದಂತಹುದು.
ಹೀಗಿದ್ದರೂ ಅಷ್ಟೇನೂ ಪ್ರಚಾರದಲ್ಲಿರದ BTM ಲೇಔಟ್’ನಲ್ಲಿರುವ ಈ ಸರ್ಕಾರಿ ಶಾಲೆ ಗುರುವಾರ ಇದ್ದಕ್ಕಿದ್ದಂತೆಯೇ ಸುದ್ದಿಯ ಕೇಂದ್ರಬಿಂದುವಾಯಿತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನೌಕರರಿಗಾಗಿ ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆ ಯೋಜನೆಗೆ 02.10.2023ರಂದು ಮುನ್ನುಡಿ ಬರೆಯಲಾಯಿತು. ಈ ಸಂಬಂಧ KSRTC ಹಾಗೂ ಶ್ರೀ ಜಯದೇವ ಹೃದ್ರೋಗ ವಿಜ್ಞಾನ – ಸಂಶೋಧನಾ ಸಂಸ್ಥೆ ಪ್ರಮುಖರು ಒಡಂಬಡಿಕೆಗೆ ಸಹಿ ಮಾಡಿದ್ದರು.
ಈ ಸಂದರ್ಭದಲ್ಲಿ ಅನೌಪಚಾರಿಕವಾಗಿ ಶಾಲೆಗಳ ಬಗ್ಗೆ ಪ್ರಸ್ತಾಪಿಸಿದ ಜಯದೇವ ಹೃದ್ರೋಗ ವಿಜ್ಞಾನ – ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾದ ಡಾ.ಮಂಜುನಾಥ್ ಅವರು BTM ಲೇಔಟ್’ನಲ್ಲಿರುವ ಸರ್ಕಾರಿ ಶಾಲೆಗಳ ಬಗ್ಗೆ ಗಮನಸೆಳೆದರು. ಈ ಶಾಲೆಗಳು ಅದೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಪ್ರತಿನಿಧಿಸುತ್ತಿರುವ BTM ಲೇಔಟ್ ವಿಧಾನಸಭಾ ಕ್ಷೇತ್ರದ್ದಾಗಿತ್ತು.
ಯಾವುದೇ Corporate ಶಾಲೆಗಳಿಗೂ ಕಮ್ಮಿಯಿಲ್ಲದಂತೆ ಸುಸಜ್ಜಿತ ಸೌಕರ್ಯಗಳನ್ನು ಕಲ್ಪಿಸಿರುವ BTM ಲೇಔಟ್’ನಲ್ಲಿರುವ ಈ ಸರ್ಕಾರಿ ಶಾಲೆಗಳಲ್ಲಿ Smart Class ಕಲ್ಪನೆಯ ಸೌಲಭ್ಯಗಳು, ಶುದ್ಧ ಗಾಳಿ ಬೆಳಕು ಬರುವಂತೆ ಶಾಲಾ ಕೊಠಡಿಗಳು, Computers ಲ್ಯಾಬ್, ಶೌಚಾಲಯ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಗ್ರಂಥಾಲಯ, ಆಡಿಟೋರಿಯಂ, ಆಸನಗಳು, ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಕ್ರೀಂಡಾಗಣ ವ್ಯವಸ್ಥೆ ಇದೆ. ಹಸಿರು ವಾತಾವರಣ ಹತ್ತು ಹಲವು, ವಿದ್ಯಾರ್ಥಿಗಳ ಓದಿಗೆ ಪೂರಕವಾದಂತಹ ಶಾಲೆಗಳ ನಿರ್ವಹಣೆ ಕಾರ್ಯ ಮಾದರಿಯಾದಂತಹುದು ಎಂದು ಬಣ್ಣಿಸಿದ ಡಾ.ಮಂಜುನಾಥ್, ಸಚಿವರ ಕಾಳಜಿ ನಿಜಕ್ಕೂ ಶ್ಲಾಘನೀಯ ಎಂದರು. ಈ ಸರ್ಕಾರಿ ಶಾಲೆಗಳಿಗೆ ಎಲ್ಲರೂ ಒಮ್ಮೆ ಭೇಟಿ ನೀಡಲೇಬೇಕು ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಶಾಲೆಯ ವಿದ್ಯಾರ್ಥಿ ಸಮುದಾಯಕ್ಕೂ ತಾವು ಸುಸಜ್ಜಿತ ಶಾಲೆಯಲ್ಲಿ ಓದುತ್ತಿರುವ ಹೆಮ್ಮೆ. ಈ ಶಾಲೆಗೆ ಭೇಟಿನೀಡುವ ಗಣ್ಯರು, ತಜ್ಞರು ಇಲ್ಲಿನ ಸೌಲಭ್ಯಗಳ ಬಗ್ಗೆ ಕೊಡಾಡುವ ವೈಖರಿಯನ್ನು ಕಂಡರೆ ತಾವು ಖಾಸಗಿ ಶಾಲೆಗಳಿಗೆ ಕಮ್ಮಿಯಿಲ್ಲದ ಸುಸಜ್ಜಿತ ಶಾಲೆಯಲ್ಲಿ ಕಲಿಯುತ್ತಿದ್ದೇವೆ ಎಂಬ ಖುಷಿ ಉಂಟಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.
ಇದೇ ರೀತಿ ಎಲ್ಲಾ ಖೇತ್ರಗಳ ಜನಪ್ರತಿನಿಧಿಗಳು ಇಚ್ಚಾ ಶಕ್ತಿ ಪ್ರದರ್ಶಿಸಿದರೆ ಎಲ್ಲಾ ಸರ್ಕಾರಿ ಶಾಲೆಗಳೂ ಸುಸಜ್ಜಿತ ಶಿಕ್ಷಣ ಕಾಶಿಗಳೆನಿಸಬಹುದು ಎಂಬುದರಲ್ಲಿ ಎರಡು ಮಾತಿಲ್ಲ.