ಮಮತಾ ಜೊತೆ ಹೆಚ್ಡಿಕೆ ರಣತಂತ್ರ; ಜೆಡಿಎಸ್ ಪ್ರಚಾರಕ್ಕೆ ಬರಲಿದ್ದಾರೆ ದೀದಿ.. 

0

ಕೋಲ್ಕತಾ: ಮಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ ಅವರು ಪ್ರಚಾರ ಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಕುಮಾರಸ್ವಾಮಿ ಭೇಟಿಯಾಗಿ ಮಹತ್ವದ ಸಲೋಚನೆ ನಡೆಸಿದರು, ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಮುಗಿಸಿ ಮಧ್ಯಾಹ್ನ ವಿಶೇಷ ವಿಮಾನದಲ್ಲಿ ಕೊಲ್ಕತಾಗೆ ತೆರಳಿದ ಅವರು ಮಮತಾ ಬ್ಯಾನರ್ಜಿ ಅವರ ಭವಾನಿಪುರ ನಿವಾಸದಲ್ಲಿ ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ಅವರ ಜತೆ ಸುದೀರ್ಘ ಮಾತುಕತೆ ನಡೆಸಲಾಯಿತು. ಮುಂಬರುವ ಕರ್ನಾಟಕದ ವಿಧಾನಸಭೆ ಚುನಾವಣೆ, ರಾಷ್ಟ್ರ ರಾಜಕಾರಣ, ರಾಹುಲ್ ಗಾಂಧಿ ಅವರ ಅನರ್ಹತೆ ಸೇರಿ ಅನೇಕ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಲಾಯಿತು ಎಂದು ಹೆಚ್ಡಿಕೆ ಮಾಹಿತಿ ನೀಡಿದ್ದಾರೆ.

ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದರು ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಕಳೆದ ಬಾರಿ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆದಾಗಲೂ ಕೇಂದ್ರ ಸರಕಾರ ವಿಪರೀತ ಕಿರುಕುಳ ನೀಡಿತು. ಆದರೂ ಜನತೆಯ ಆಶೀರ್ವಾದದಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂತು. ಅದೇ ರೀತಿ ಕರ್ನಾಟಕದಲ್ಲಿ ಜೆಡಿಎಸ್ ಕೂಡ ಅಧಿಕಾರಕ್ಕೆ ಬರಲಿದೆ ಎಂದು ಮಮತಾ ಅವರು ಹೇಳಿದ್ದಾಗಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ನೀವು ಯಾವಾಗ ಹೇಳಿದರೂ ನಾನು ಕರ್ನಾಟಕಕ್ಕೆ ಬಂದು ಜೆಡಿಎಸ್ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತೇನೆ. ನೀವು ವೇಳಾಪಟ್ಟಿಯನ್ನು ಸಿದ್ಧಪಡಿಸಿ ತಿಳಿಸಿ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದರು. ಇದರಿಂದ ನನಗೆ ಬಹಳ ಸಂತಸ ಆಗಿದೆ. ಇಂದು ಅವರು ನನ್ನನ್ನು ಅತ್ಯಂತ ಅದರಪೂರ್ವಕವಾಗಿ ಸ್ವಾಗತಿಸಿ ಗೌರವಿಸಿದರು ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಇದೇ 26ರಂದು ಮೈಸೂರಿನಲ್ಲಿ ನಡೆಯಲಿರುವ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾವೇಶದ ಬಗ್ಗೆಯೂ ಮಮತಾ ಅವರು ಮಾಹಿತಿ ಪಡೆದರು. ಅಲ್ಲದೆ, ಕರ್ನಾಟಕದ ರಾಜಕೀಯ ವಿದ್ಯಮಾನಗಳ ಚರ್ಚಿಸಿದರು ಎಂಬುದಾಗಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed