ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕವನ್ನು ಜಾರಿಗೆ ಮುಂದಾಗಿ: ಸರ್ಕಾರಕ್ಕೆ ಅಶೋಕ್ ಹಾರನಹಳ್ಳಿ ಸಲಹೆ
ಹಾವೇರಿ: ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿಯೇ ಸರ್ಕಾರ ಸಮಗ್ರ ಕನ್ನಡ ಭಾಷ ಅಭಿವೃದ್ಧಿ ವಿಧೇಯಕವನ್ನು ಸದನದಲ್ಲಿ ಮಂಡಿಸಿ ಕಾನೂನು ರೂಪಿಸಬೇಕಿತ್ತು. ಆದರೆ ಸದನದಲ್ಲಿ ಈ ವಿಧೇಯಕ ಮಂಡನೆಯಾಗಿಲ್ಲ. ಸರ್ಕಾರ ತಡ ಮಾಡದೇ ಸುಗ್ರಿವಾಜ್ಞೆ ಮೂಲಕ ವಿಧೇಯಕದ ಜಾರಿಗೆ ಮುಂದಾಗಬೇಕು ಎಂದು ಹಿರಿಯ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಹಾವೇರಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪಾಪು-ಚಂಪಾ ವೇದಿಕೆಯಲ್ಲಿ ಎರೆಡನೇ ದಿನದ “ಕನ್ನಡಪರ ಮತ್ತು ಪ್ರಗತಿಪರ ವರದಿಗಳ ಅನುಷ್ಠಾನ” ಗೋಷ್ಠಿಯಲ್ಲಿ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕದ ಕಾನೂನು ಚಿಂತನೆ ವಿಷಯದ ಕುರಿತು ಅವರು ಮಾತನಾಡಿದರು. ರಾಜ್ಯ ಸರ್ಕಾರ 1963ರಲ್ಲಿ ರಾಜ್ಯ ಭಾಷಾ ಅಧಿನಿಯಮ ಜಾರಿಗೆ ತಂದಿದೆ. ಗೋಕಾಕ್, ಸರೋಜಿನಿ ಮಹಿಷಿ, ನರಸಿಂಹಯ್ಯ, ರಾಜಾ ರಾಮಣ್ಣ, ವಿ.ಎಸ್.ಆಚಾರ್ಯ ಸೇರಿದಂತೆ ಅನೇಕ ಮಹನಿಯರು ಕನ್ನಡ ಭಾಷೆಯ ಪರ ವರದಿಗಳನ್ನು ನೀಡಿದ್ದಾರೆ. ಇವುಗಳು ಯಾವು ಕೂಡ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. 1963ರ ರಾಜ್ಯ ಭಾಷಾ ಅಧಿನಿಯಮಕ್ಕೆ ಬದಲಾವಣೆ ತರುವುದು ಅಗತ್ಯವಾಗಿದೆ. ಸರ್ಕಾರ ಬರಿ ಮಾತಿನಲ್ಲಿ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕದ ಬಗ್ಗೆ ಹೇಳದೆ, ಕೃತಿಯಲ್ಲಿ ಜಾರಿಗೊಳಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವಿಧೇಯಕ ಜಾರಿ ಕುರಿತು ಒಲವು ಹೊಂದಿದ್ದಾರೆ ಎಂದರು.
ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕದಲ್ಲಿ ರಾಜ್ಯ ಭಾಷಾ ಆಯೋಗದ ರಚನೆ, ರಾಜ್ಯ ಭಾಷಾ ಸಮಿತಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಗಳ ರಚನೆ ಕುರಿತು ಪ್ರಸ್ತಾಪಿಸಲಾಗಿದೆ. ಈ ಸಮಿತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ, ಜಿಲ್ಲೆ ಹಾಗೂ ತಾಲೂಕುಗಳ ಅಧ್ಯಕ್ಷರನ್ನು ನೇಮಿಸಿಕೊಳ್ಳುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೇನೆ ಎಂದರು.
ಗ್ರಾಮೀಣ ಭಾಗಗಳಿಗಿಂತಲೂ ನಗರ ಪ್ರದೇಶದಲ್ಲಿ ಕನ್ನಡ ಭಾಷೆಯ ಕುರಿತು ಅಭಿಮಾನ ಕಡಿಮೆಯಾಗಿದೆ. ಸಂವಿಧಾನದ 350(ಎ) ವಿಧಿ ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಲು ತಿಳಿಸುತ್ತದೆ. 1989ರಲ್ಲಿ ಜರುಗಿದ ಮಕ್ಕಳ ಸಮ್ಮೇಳನದಲ್ಲೂ ನೆಲದ ಸಂಸ್ಕೃತಿ ಹಾಗೂ ಮೌಲ್ಯಗಗಳನ್ನು ಮಕ್ಕಳಲ್ಲಿ ಬೆಳೆಸಲು ಮಾತೃ ಭಾಷೆ ಉತ್ತಮ ಎಂದು ಹೇಳಲಾಗಿದೆ. 1946ರಲ್ಲಿ ಮಹಾತ್ಮ ಗಾಂಧೀಜಿಯವರು ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಒದಗಿಸುವ ಕುರಿತು ತಮ್ಮ ಹರಿಜನ ಪತ್ರಿಕೆಯಲ್ಲಿ ಲೇಖಕ ಪ್ರಕಟಿಸಿದ್ದರು. ರಷ್ಯಾಯಾದ ಮನಶಾಸ್ತ್ರಜ್ಞರು ಲೆವ್ ಗೆವೋಟೆಸ್ಕಿ ಮಕ್ಕಳಲ್ಲಿನ ಭಾಷಾ ಚಿಂತನೆ ಕುರಿತು ಅಧ್ಯಯನ ನೆಡೆಸುವಾಗ ಮಾತೃ ಭಾಷೆಯ ಮಹತ್ವನ್ನು ತಿಳಿಸಿದ್ದಾರೆ. ಈಗಿನ ನೂತನ ಶಿಕ್ಷಣ ನೀತಿಯಲ್ಲಿ ಮಾತೃ ಭಾಷಾ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ರಾಜ್ಯದಲ್ಲಿ ಕನ್ನಡ ಹೊರತಾಗಿ ಉರ್ದು, ತುಳು, ಬ್ಯಾರಿ, ಕೊಡವ, ಕೊಂಕಣಿ ಭಾಷೆಗಳು ಇವೆ. ಈ ಜನರ ಸಂಖ್ಯೆ ಕಡಿಮೆ ಇದೆ. ಮಾತೃ ಭಾಷೆಯಲ್ಲಿ ಇವರು ಶಿಕ್ಷಣ ಪಡೆದರು ಕನ್ನಡ ತೊಂದರೆ ಇಲ್ಲ. ಆದರೆ ಕನ್ನಡ ಮಾತನಾಡುವ ಬಹುವರ್ಗದ ಜನರು ಇಂದು ಇಂಗ್ಲೀಷ್ ಮಾಧ್ಯಮ ಶಾಲೆಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇದರಿಂದ ಕನ್ನಡಕ್ಕೆ ಹೆಚ್ಚಿನ ತೊಂದರೆ ಇಲ್ಲ. ಸರ್ವೊಚ್ಛ ನ್ಯಾಯಾಲಯವು ಮಕ್ಕಳ ಶಿಕ್ಷಣ ಮಾಧ್ಯಮದ ಆಯ್ಕೆ ಬಗ್ಗೆ ಪೋಷಕರ ನಿಲುವು ಅಂತಿಮ. ಇದಕ್ಕೆ ಒತ್ತಾಯ ಪಡಿಸಬಾರದು ಎಂದು ಆದೇಶ ನೀಡಿದೆ. ಇದರಿಂದಾಗಿ ಸರ್ಕಾರ ನೀತಿ ನಿಯಮಗಳನ್ನು ರೂಪಿಸಲು ತೊಡಕಾಗಿದೆ. ಖಾಸಗಿ ಶಾಲೆ ಹಾಗೂ ಪೊಷಕರು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಮಾತೃ ಭಾಷೆ ಶಿಕ್ಷಣಕ್ಕೆ ಒತ್ತು ನೀಡಬೇಕು. ರಾಜ್ಯ ಸರ್ಕಾರ ಅನುದಾನ ಪಡೆಯುವ ಸ್ವತಂತ್ರ ಹಾಗೂ ಸಂಸ್ಥೆಗಳನ್ನು ಹತೋಟಿ ತಂದು ಕನ್ನಡ ಕಡ್ಡಾಯ ಮಾಡಬೇಕು. ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು ಎಂದರು.
ಆಶಯ ನುಡಿಗಳನ್ನು ಆಡಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತ ಡಾ.ಕೆ.ಮುರಳಿಧರ, ಆಡಳಿತ, ಶಿಕ್ಷಣ, ಕಾನೂನು, ಕೈಗಾರಿಕೆ, ತಂತ್ರಜ್ಞಾನ ಆಧಾರಿತ ತಜ್ಞರು ಸೇರಿ ಕನ್ನಡ ಭಾಷೆಯ ಕುರಿತು ಅನುಷ್ಠಾನಗೊಳಿಸಬಹುದಾದ ವರದಿಗಳನ್ನು ನೀಡಿದರೆ ಸರ್ಕಾರ ಅನುಷ್ಠಾನಗೊಳಿಸುತ್ತದೆ. ಇಂದು ಸರ್ಕಾರದ ಬಳಿ 300ಕ್ಕೂ ಅಧಿಕ ವರದಿಗಳು ಅನುಷ್ಠಾನವಾಗದೇ ವಿವಿಧ ಹಂತದಲ್ಲಿ ಉಳಿದುಕೊಂಡಿವೆ. ಕನ್ನಡ ಭಾಷೆಯ ಕುರಿತು ಸರ್ಕಾರ ಅನೇಕ, ಆದೇಶ, ಸುತ್ತೋಲೆಗಳನ್ನು ಹೊರಡಿಸಿದೆ ಆದರೆ ಇವುಗಳು ಅನುಷ್ಠಾನವಾಗುತ್ತಿಲ್ಲ. ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿ ಇವರುವ ಕಾರಣ ರಾಜ್ಯ ಸರ್ಕಾರ ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಲು ಸಾಧ್ಯವಾಗುತ್ತಿಲ್ಲ. ಇಂದು ಶೇ.70 ರಷ್ಟು ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಶೇ.30 ರಷ್ಟು ಮಾತ್ರ ಸರ್ಕಾರಿ ಶಾಲೆಗಳು ಉಳಿದಿವೆ. ಈ ಸಂದರ್ಭದಲ್ಲಿ ಸರ್ಕಾರ ವಿಭಿನ್ನ ರೀತಿಯ ಕಾನೂನುಗಳನ್ನು ಜಾರಿಗೆ ತರಬೇಕಾದ ಪರಿಸ್ಥಿತಿಯಿದೆ. ರಾಜ್ಯದಲ್ಲಿ 19 ಜಿಲ್ಲೆಗಳು ಗಡಿಭಾಗದಲ್ಲಿವೆ. ಇಲ್ಲಿ ಬಹುತೇಕ ಜನರು ದ್ವಿಭಾಷಿಗಳಾಗಿದ್ದಾರೆ. ಕಚೇರಿಗಳಲ್ಲಿ ಕನ್ನಡ ಬಳಕೆಗೆ ಆಧ್ಯತೆ ನೀಡಲಾಗಿದೆ. ಕನ್ನಡ ಭಾಷೆಗೆ ಮಹತ್ವ ನೀಡದ ಎ.ಎ.ಎಸ್ ಅಧಿಕಾರಿಗಳನ್ನು ಸರ್ಕಾರ ಕೇಂದ್ರ ಸರ್ಕಾರದ ಸೇವೆಗೆ ಮರಳಿ ಕಳಿಸಕೊಡಬೇಕು. ರಾಜ್ಯದಲ್ಲಿನ ಕೇಂದ್ರ ಸರ್ಕಾರ ರೈಲ್ವೇ, ಅಂಚೆ, ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ಬಳಕೆಗೆ ಒತ್ತು ನೀಡಬೇಕು. ಕೆಳ ಹಂತದ ನ್ಯಾಯಾಲಯಗಳಲ್ಲಿ ಇಂದು ಕನ್ನಡ ಬಳಕೆಯಿದೆ. ಆದರೆ ರಾಜ್ಯ ಹೈಕೋರ್ಟ್ನಲ್ಲಿ ಕನ್ನಡ ಭಾಷೆ ಬಳಕೆಯಾಗುವುದಿಲ್ಲ. ಇದರಿಂದ ಕನ್ನಡರಿಗೆ ತೊಂದರೆಯಾಗಿದೆ ಎಂದರು.
ರಾಜ್ಯ ಸರ್ಕಾರ ರೂಪಿಸುವ ನೀತಿ ನಿಮಯಗಳಲ್ಲಿ ಕನ್ನಡ ಕುರಿತಾಗಿ ಚಿಂತನೆ ಇರಬೇಕು. ರಾಜ್ಯ ಸರ್ಕಾರ ನೂತನ ಕೈಗಾರಿಕಾ ನೀತಿ ಜಾರಿಗೊಳಿಸಿದೆ. ವಿದೇಶಿ ಕಂಪನಿಗಳಿಗಾಗಿ ರೈತರ ಭೂಮಿ ವಶಪಡಿಸಕೊಳ್ಳಲಾಗುವುದು. ಕೈಗಾರಿಕೆ ಆರಂಭವಾದ ಮೇಲೆ ಈ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನೀಡುವುದಿಲ್ಲ. ರಾಜ್ಯದ ನೆಲ, ಜಲ, ಹಾಗೂ ಸೌಕರ್ಯಗಳನ್ನು ಬಳಸುವ ಕಂಪನಿಗಳು ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡದಿದ್ದರೆ, ಸರ್ಕಾರ ನೀಡಿದ ಸವಲತ್ತುಗಳನ್ನು ಹಿಂಪಡೆಯಲು ಕಾನೂನು ರೂಪಿಸಬೇಕು ಎಂದರು.
ಡಾ.ವೀರಣ್ಣ ರಾಜೂರು ಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ಸೋಮಶೇಖರ್ ಜಮಶೆಟ್ಟಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಶಾಂತಗಿರಿ ನಿರೂಪಿಸಿದರು. ಬಸವರೆಡ್ಡಿ ಪಾಟೀಲ್ ವಂದಿಸಿದರು. ಗೊರಳ್ಳಿ ಜಗದೀಶ್ ನಿರ್ವಹಿಸಿದರು.