‘ಅರಿಯದ ಕರೆಗೆ ಓಗೊಟ್ಟು ಜೀವನದ ಅನ್ವೇಷಣೆಗೆ ತೊಡಗಿದರೆ ಅದೇ ಅನುಭಾವ’
ಹಾವೇರಿ : ಕಣ್ಣಿಗೆ ಕಾಣದ, ಅರಿಯದ ಕರೆಗೆ ಓಗೊಟ್ಟು ಜೀವನದ ಅನ್ವೇಷಣೆಗೆ ತೊಡಗಿದರೆ ಅದೇ ಅನುಭಾವ. ಬಸವಣ್ಣ, ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭು ಸೇರಿದಂತೆ ಹಲವು ಶರಣರು ಇಂತಹ ಕರೆಗೆ ಓಗೊಟ್ಟು ಜೀವನದ ಅನ್ವೇಷಣೆಗೆ ತೊಡಗಿದರು ಎಂದು ಆಧ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ ಹೇಳಿದರು.
ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪಾಪು-ಚಂಪಾ ವೇದಿಕೆಯಲ್ಲಿ ಎರಡನೇ ದಿನದ ಗೋಷ್ಠಿಯಲ್ಲಿ ವಚನ ಪರಂಪರೆ ವಿಷಯದಡಿ, ವಚನಗಳಲ್ಲಿ ಅನುಭಾವದ ಕುರಿತು ಅವರು ಮಾತನಾಡಿದರು. ಅನುಭವ ಹಾಗೂ ಅನುಭಾವ ಎರೆಡೂ ಬೇರೆ ಬೇರೆ. ಜೀವನದ ಪ್ರತಿನಿತ್ಯದ ಜಂಜಾಟಗಳಲ್ಲಿ ನಮಗೆ ಲಭಿಸುವುದು ಅನುಭವ. ಅನುಭಾವ ಆಧ್ಯಾತ್ಮ ಚಿಂತನೆ. ದೇವರ ಸಾಕಾರ ಆಗುವವರೆಗೂ ನಮ್ಮನ್ನು ನಾವು ಅನ್ವೇಷಿಸಿಕೊಳ್ಳಬೇಕು. ಕೂಡಸಂಗಮದೇವನಿಗಾಗಿ ಬಸವಣ್ಣ, ಚನ್ನಮಲ್ಲಿಕಾರ್ಜುನನಿಗಾಗಿ ಅಕ್ಕಮಹಾದೇವಿ, ಗುಹೇಶ್ವರನಿಗಾಗಿ ಅಲ್ಲಮ ಪ್ರಭು ಅನ್ವೇಷಿಸಿ ತಮ್ಮ ಬದುಕನ್ನು ಸಾಗಿಸಿದರು. ಇಂತಹ ಅನ್ವೇಷಣೆಯಲ್ಲಿ ತೊಡಗಿದ ಇವರಿಗೆ ಬದುಕಿನ ಅನಿಶ್ಚಿತತೆ ಕಾಡಲಿಲ್ಲ. ಭೌತಿಕ ವಸ್ತುಗಳ ಹಾಗೂ ವ್ಯವಹಾರಗಳನ್ನು ತ್ಯಜಿಸಿ ಮುನ್ನೆಡೆದರು. ತಾವು ಕಂಡುಕೊಂಡ ಸತ್ಯದ ಆಚೆಯೂ ಇನ್ನೊಂದು ಸತ್ಯವಿದೆ ಎಂದು ನಂಬಿ ಅನುಭಾವವನ್ನು ಹುಡುಕಿದರು ಎಂದರು.
ವಚನ ಎಂದರೆ ಮಾತು, ಇದು ನಮ್ಮ ಅಂತರಂಗದ ಪ್ರಜ್ಞೆಯಿಂದ ಹೊರಹೊಮ್ಮುತ್ತದೆ. ಮಾತು ಮಂತ್ರವಾಗಿ ಮನುಷ್ಯನನ್ನು ಬೆಳೆಸುತ್ತದೆ. ಆಡಿದ ಮಾತಿಗೆ ಬದ್ದವಾಗಿದ್ದು, ಸಂಕಲ್ಪ ಮಾಡಿ, ಪ್ರಾಣ ಹೋದರು ಆಡಿದ ಮಾತನ್ನು ನೆಡಸಬೇಕು. ಹಾಗಿದ್ದಾಗ ಮಾತ್ರ ಮಾತು ಮಂತ್ರವಾಗಿ ಸತ್ಯದ ಬೆಳಕಿನ ದರ್ಶನವಾಗುತ್ತದೆ ಎಂದರು.
ಆಶಯ ನುಡಿ ಆಡಿದ ಮುಂಡರಗಿ ಅನ್ನದಾನೇಶ್ವರ ಸಂಸ್ಥಾನ ಮಠದ ನಾಡೋಜ ಜಗದ್ಗುರು ಶ್ರೀ ಅನ್ನದಾನೇಶ್ವರ ಮಹಸ್ವಾಮಿಗಳು, ಸಾಹಿತ್ಯ ಸಮ್ಮೇಳನ, ಕನ್ನಡಿಗರನ್ನು ಒಂದು ಮಾಡಿದೆ. ವಿಶ್ವದ ಅನುಭಾವ ಸಾಹಿತ್ಯದಲ್ಲಿ ವಚನ ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ. ವಚನಗಳು ಮಾನವರಿಗೆ ಮಾರ್ಗದರ್ಶಕವಾಗಿವೆ. ತಾತ್ವಿಕ ಸಿದ್ದಾಂತಗಳು, ಆದರ್ಶಗಳು ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಹಾಗೂ ಮಾನಸಿಕ ಸಂಕಷ್ಟಗಳನ್ನು ಪರಿಹರಿಸಲು ವಚನ ಸಾಹಿತ್ಯ ಸಹಕಾರಿಯಾಗಿದೆ. ಶಿವಶರಣರು ವಚನಗಳನ್ನು ರಚಿಸುವುದರ ಮೂಲಕ ಜನಭಾμÉಯನ್ನು ದೈವಭಾμÉಯಾಗಿಸಿದರು ಎಂದರು.
ನ್ಯಾಯನಿಷ್ಠುರಿ, ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಹಾಮನೆ ಕುರಿತು ಮಾತನಾಡಿದ ಡಾ.ಕಾಂತೇಶ ಅಂಬಿಗೇರ, ಡಂಬದ ವೈರಿ, ಉರಿನಾಲಿಗೆ ಉಗ್ರವಾದಿ ಎಂದು ಹೆಸರಾದ ಅಂಬಿಗರ ಚೌಡಯ್ಯನ ವಚನಗಳು ಮೆಣಸಿನಕಾಯಿ ತರ ಚಿಕ್ಕದಿದ್ದರು ಘಾಟು ಹೆಚ್ಚು. ಶರಣರ ತತ್ವ ಆಚರಣೆ ನಡುವೆ ವ್ಯತ್ಯಾಸ ಕಂಡು ಬಂದಾಗ ಅಂಬಿಗರ ಚೌಡಯ್ಯ ಶರಣರನ್ನು ಖಂಡಿಸಿ ವಚನಗಳನ್ನು ರಚಿಸಿದ. ಅಂಬಿಗರು ಕೆಲಸಕ್ಕೆ ಬಳಸುತ್ತಿದ್ದ ಪರಿಕರಗಳನ್ನು ಆಧ್ಯಾತ್ಮಿಕ ಪ್ರತೀಕಗಳಾಗಿ ಚೌಡಯ್ಯ ವಚನಗಳಲ್ಲಿ ಬಳಸಿದ್ದಾರೆ ಇತರ ಶಿವಶರಣರಿಗಿಂತ ಭಿನ್ನವಾಗಿದ್ದ ಚೌಡಯ್ಯ ಸ್ವತಂತ್ರ ವ್ಯಕ್ತಿತ್ವನ್ನು ಹೊಂದಿದ್ದರು. ತನ್ನ ಹೆಸರನ್ನೇ ಅಂಕಿತ ನಾಮವಾಗಿ ಬಳಸಿ ವಚನಗಳನ್ನು ರಚಿಸಿದರು. ಇದುವರೆಗೂ ಅಂಬಿಗರ ಚೌಡಯ್ಯನವರ 330 ವಚನಗಳು ಸಂಪಾದನೆಯಾಗಿವೆ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಸಮಗ್ರ ವಚನ ಸಂಕಲನಗಳಲ್ಲಿ ಚೌಡಯ್ಯನವರ 289 ವಚನಗಳನ್ನು ಪ್ರಕಟಿಸಲಾಗಿದೆ. ಶಿವಶರಣ ತತ್ವಗಳು ಹಿಡಿಸದಿದ್ದರೆ, ಅದನ್ನು ತಿರಸ್ಕರಿಸಿದ ಉದಾಹಾರಣೆಗಳು ಇವೆ. ಎಲ್ಲಾ ಶಿವಶರಣರು ಒಪ್ಪಿದ್ದ ಶರಣಸತಿ-ಲಿಂಗಪತಿ ತತ್ವವನ್ನು ಚೌಡಯ್ಯನವರು ತಿರಸ್ಕರಿಸಿದರು. ಶಿವಶರಣ ಹಾಗೂ ಲಿಂಗ ಎರಡೂ ನೀರು ಇದ್ದಹಾಗೆ, ನೀರಿನಲ್ಲಿ ನೀರು ಬೆರೆತರೆ ಭೇದ ಎಣಿಸಲಾಗುವುದೇ ಎಂದು ಪ್ರಶ್ನಿಸಿದರು. ಗುರು-ಲಿಂಗ-ಜಂಗಮಗಳನ್ನು ಭಿನ್ನವಾಗಿಸದೇ ಇವುಗಳನ್ನು ಶುದ್ಧ- ಸಿದ್ದ-ಪ್ರಸಿದ್ದ ಪ್ರಸಾದಗಳು ಎಂದು ಹೇಳಿದರು. ಕುಲಹೀನ ಶಿಷ್ಯನಿಗೆ ಲಿಂಗಧಾರಣೆ ಮಾಡಿ, ಶಿಷ್ಯನ ಮನೆಯಲ್ಲಿ ಉಣದೆ ಧಾನ್ಯ ಕೊಂಡಯ್ಯುವ ಗುರುವಿನ ಬಗ್ಗೆ ಲೇವಡಿ ಮಾಡಿ, ಜಾತಿ ವ್ಯವಸ್ಥೆಯನ್ನು, ಜಾತಿ ಭೇದ ಮಾಡುವ ಗುರುವನ್ನು ಚೌಡಯ್ಯ ಖಂಡಿಸಿದ. ಏಕದೇವೋಪಾಸನೆ ಹಾಗೂ ತೀರ್ಥಯಾತ್ರೆಗಳನ್ನು ಖಂಡಿಸಿದರು. ಕಲ್ಯಾಣದ ಮಹಾಮನೆ, ಬಸವಣ್ಣ, ನೀಲಲೋಚನೆ, ಚನ್ನಬಸವಣ್ಣ ಕುರಿತು ಪ್ರಸ್ತಾಪಗಳನ್ನು ಚೌಡಯ್ಯನವರ ವಚನಗಳಲ್ಲಿ ಕಾಣಬಹುದು. ಗುಮ್ಮಳಾಪುರದ ಸಿದ್ದಲಿಂಗ ಸ್ವಾಮಿಗಳ ಶೂನ್ಯ ಸಂಪಾದನೆಯಲ್ಲಿ ಚೌಡಯ್ಯನವರ ಉಲ್ಲೇಖವಿದೆ. ಕಲ್ಯಾಣ ಕ್ರಾಂತ್ರಿಯ ಬಳಿಕ ಚನ್ನಬಸವಣ್ಣ ಜೊತೆ ವಚನಗಳನ್ನು ರಕ್ಷಿಸಿ ಉಳಿವಿಗೆ ತಂದು, ನಂತರ ಇಂದಿನ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚೌಡಯ್ಯಪುರದಲ್ಲಿ ತನ್ನ ಕೊನೆಗಾಲವನ್ನು ಚೌಡಯ್ಯ ಕಳೆದರು ಎಂದರು.
ವಚನಗಳಲ್ಲಿ ಕಾಯಕ ಮತ್ತು ದಾಸೋಹ ಪ್ರಜ್ಞೆ ಕುರಿತು ಮಾತನಾಡಿದ ಸಂಗಮೇಶ ಪೂಜಾರ, 12 ಶತಮಾನದ ಶರಣ ಕ್ರಾಂತಿ ಮೇಲ್ವರ್ಗದವರಲ್ಲಿ ವಿನಯ ರೂಪಿಸಿದರೆ, ಕೆಳವರ್ಗದವರಲ್ಲಿ ಗರ್ವ ಬೆಳೆಸಿ ಆತ್ಮವಿಶ್ವಾಸ ರೂಪಿಸಿದೆ. ಇದುವರೆಗೂ 23 ಸಾವಿರ ವಚನಗಳನ್ನು ಸಂಪಾದಿಸಲಾಗಿದೆ. ಇದರಲ್ಲಿ 413 ವಚನಗಳಲ್ಲಿ ಕಾಯಕದ ಕುರಿತು ಹೇಳಲಾಗಿದೆ. 67ಕ್ಕೂ ಹೆಚ್ಚು ವಚನಕಾರರು ಕಾಯಕದ ಬಗ್ಗೆ ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಕಾಯಕವೇ ಕೈಲಾಸ ಎಂದು ಕಾಯಕಕ್ಕೆ ದೈವತ್ವಕ್ಕೆ ಸ್ಥಾನಮಾನ ನೀಡಿದರು. ಕಾಯಕವು ಸತ್ಯ ಶುದ್ದತೆಯಿಂದ ಕೂಡಿ ಜೀವತಾರುಣ್ಯ ಹೆಚ್ಚಿಸುವಂತೆ ಇರಬೇಕು ಎಂದು ಶರಣರು ಪ್ರತಿಪಾದಿಸಿದರು ಎಂದರು.
ಎಂ.ಎಂ.ಕಲಬುರ್ಗಿ ಅವರು ಹೇಳುವಂತೆ ಶಿವಶರಣ ನೀತಿ ‘ನಾನು ದುಡಿಯಬೇಕು ನಾವು ಉಣ್ಣಬೇಕು’ ಎಂಬುದಾಗಿದೆ. ದಾಸೋಹ ಎಂಬ ಪದವನ್ನು 250 ಕ್ಕೂ ಹೆಚ್ಚು ವಚನಗಳಲ್ಲಿ ಕಾಣಬಹುದು. ದಾಸೋಹ ಎಂಬುದು ಸಂಸ್ಕøತ ಪದದಿಂದ ನಿಷ್ಪತ್ತಿ ಹೊಂದಿದೆ. ಬಸವಣ್ಣ ‘ಸೋ ಅಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ’ ಎಂದು ಹೇಳಿದ್ದಾರೆ. ಸಂಗ್ರಹ ತತ್ವಕ್ಕೆ ವಿರುದ್ಧವಾಗಿ ಅಸಂಗ್ರಹ ತತ್ವವನ್ನು ವಚನಗಳು ದಾಸೋಹದ ಮೂಲಕ ತಿಳಿಸಿವೆ ಎಂದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಸಂಗಮೇಶ ಸವದತ್ತಿ, 11ನೇ ಶತಮಾನದ ದೇವರ ದಾಸಿಮಯ್ಯನಿಂದ 16ನೇ ಶತಮಾನದ ಷಣ್ಮುಖ ಶಿವಯೋಗಿಗಳ ವರೆಗೆ ಮೊದಲ ಘಟ್ಟದಲ್ಲಿ ವಚನಗಳು ರಚನೆಯಾದವು. ಇಂದು ನಾಡಿನಲ್ಲಿ ಆಧುನಿಕ ವಚನ ಸಾಹಿತ್ಯ ಪರಂಪರೆ ಇದ್ದು 2500ಕ್ಕೂ ಅಧಿಕ ಕವಿಗಳು ವಚನಗಳನ್ನು ರಚಿಸಿದ್ದಾರೆ. ಇದರಲ್ಲಿ ಶೇ.30 ವಚನಗಾರ್ತಿಯರು ಇದ್ದಾರೆ. ಆದರೆ ಆಧುನಿಕ ವಚನಗಳಲ್ಲಿ 12 ಶತಮಾನ ವಚನಗಳ ಅನುಭಾವ ಕಾಣುವುದಿಲ್ಲ. ವಿದೇಶಿ ಚಿಂತನೆಗಳಿಂದ ಪ್ರಭಾವಿತರಾದ ಸಾಹಿತಿಗಳು ದೇಶದ ಪರಂಪರೆಯನ್ನು ಖಂಡಿಸುತ್ತಾರೆ. ವಚನಗಳು ವೇದಗಳಿಗೆ ಹಾಗೂ ವೈದಿಕ ಧರ್ಮಕ್ಕೆ ವಿರುದ್ಧವಾಗಿವೆ ಎಂದು ಹೇಳುತ್ತಾರೆ. ಇದು ತಪ್ಪು ಕಲ್ಪನೆ. ಶರಣರು ವೇದ ಆಗಮಗಳ ವಿರೋಧಿಗಳು ಎಂಬುದು ಸರಿಯಾದ ನಿಲುವು ಅಲ್ಲ. ಶಿವಶರಣರ ವಚನ ಕ್ರಾಂತಿ ಪಂಡಿತ ಮುಖವಾಗಿದ್ದ, ಧರ್ಮ ಸಿದ್ಧಾಂತಗಳನ್ನು ಜನಮುಖವಾಗಿಸಿತು ಎಂದರು.
ವಿವೇಕಾನಂದಗೌಡ ಪಾಟೀಲ ಸ್ವಾಗತಿಸಿದರು. ಸುರೇಶ ಚನಶೆಟ್ಟಿ ನಿರೂಪಿಸಿದರು. ಡಾ.ರವೀಂದ್ರನಾಥ ಹೊಸಮನಿ ಗೋಷ್ಠಿ ನಿರ್ವಹಿಸಿದರೆ, ಪ್ರಭಣ್ಣ ಅರಗೋಳ ವಂದಿಸಿದರು.