ಪೊಲೀಸ್ ಸಿಬ್ಬಂದಿಗೆ ಗುಡ್ ನ್ಯೂಸ್.. ಭಡ್ತಿ ಮೂಲಕ ಹುದ್ದೆ ತುಂಬಲು ಸರ್ಕಾರ ಮುನ್ನುಡಿ
ಬೆಂಗಳೂರು: ಪೊಲೀಸ್ ಅಧಿಕಾರಿಗಳು ಬಹು ಕಾಲದಿಂದ ಕಾತುರದಿಂದ ಎದುರುನೋಡುತ್ತಿದ್ದ ವಿಚಾರ ಇದೀಗ ಸಾಕಾರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದೆ. ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಂತೆಯೇ ಮತ್ತೊಂದೆಡೆ ಖಾಲಿ ಇರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ಭರ್ತಿಗಾಗಿ ಸರಳ ನಡೆ ಅನುಸರಿಸಲು ಗೃಹ ಇಲಾಖೆ ಮುಂದಾಗಿದೆ. ಬಹುತೇಕ ಪಿಎಸ್‌ಐ ಹುದ್ದೆಗಳನ್ನು ಭಡ್ತಿ ಆಧಾರದಲ್ಲಿ ಭರ್ತಿ ಮಾಡಲು ಸರ್ಕಾರ ಪ್ರಕ್ರಿಯೆ ಆರಂಭಿಸಿದೆ.
ಪಿಎಸ್‌ಐ ಹುದ್ದೆಗೆ ನೇರ ನೇಮಕಾತಿ ನಡೆಸಿದಲ್ಲಿ ಭರ್ತಿ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತದೆಯಾದರೂ, ನೇರ ನೇಮಕಾತಿಯಿಂದ ಪಿಎಸ್‌ಐ ಆದ ಅಧಿಕಾರಿಯು, ಭಡ್ತಿ ಮೂಲಕ ಪಿಎಸ್‌ಐ ಆಗುವ ಅಧಿಕಾರಿಯಷ್ಟು ಇಲಾಖೆಯ ಆಳ-ಅಗಲ ತಿಳಿದವರಾಗಿರುವುದಿಲ್ಲ. ಅಷ್ಟು ಸಮರ್ಥರಾಗಲು ಕಾಲಾವಕಾಶ ಬೇಕಾಗುತ್ತದೆ. ಅದರಲ್ಲೂ ಭಡ್ತಿ ಮೂಲಕ ಪಿಎಸ್‌ಐ ಆಗುವವರು ಅದಾಗಲೇ ಇಲಾಖೆಯಲ್ಲಿ 25 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುವುದರಿಂದ ಅಗಾಧ ಜ್ಞಾನ ಹೊಂದಿರುತ್ತಾರೆ ಎಂಬುದು ಹಲವರ ಅಭಿಪ್ರಾಯ. ಈ ನಿಟ್ಟಿನಲ್ಲಿ ಭಡ್ತಿ ಪ್ರಕ್ರಿಯೆ ವಿಳಂಬ ಮಾಡದೆ ಹೆಚ್ಚಿನ ಹುದ್ದೆಗಳಿಗೆ ಜೇಷ್ಠತೆ ಆಧಾರದಲ್ಲಿ ನಿಯುಕ್ತಿ ಆಗಬೇಕೆಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಇದೀಗ ಈ ಗೃಹ ಇಲಾಖೆ ಇಟ್ಟಿರುವ ಹೆಜ್ಜೆ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಹಿಮ್ಮಸ್ಸು ಹೆಚ್ಚಿಸಿದೆ.
ಗೃಹ ಸಚಿವರು ಹೇಳಿದ್ದೇನು?
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಅತೀ ಶೀಘ್ರದಲ್ಲೇ ಪಿಎಸ್‌ಐ ಹುದ್ದೆಗಳನ್ನು ಭರ್ತಿ ಮಾಡಲಾಗುವುದೆಂದು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿರುವ ಅವರು, ಸದ್ಯಕ್ಕೆ ಖಾಲಿ ಇರುವ ಪಿಎಸ್‌ಐ ಹುದ್ದೆಗಳನ್ನು ಮುಂಬಡ್ತಿ ಮೂಲಕ ತುಂಬಲು ಉದ್ದೇಶಿಸಿದ್ದು, 500 ರಿಂದ 600 ಎಎಸ್‌ಐಗಳಿಗೆ ಬಡ್ತಿ ನೀಡಿ ಪಿಎಸ್‌ಐ ಹುದ್ದೆ ಭರ್ತಿ ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಗೃಹ ಇಲಾಖೆಯಲ್ಲಿ ಪಿಎಸ್‌ಐ ಹುದ್ದೆಯಿಂದ ಕಾನ್‌ಸ್ಟೆಬಲ್ ಹುದ್ದೆವರೆಗೆ ಸುಮಾರು 20 ಸಾವಿರ ಹುದ್ದೆಗಳು ಖಾಲಿ ಇವೆ. 545 ಪಿಎಸ್‌ಐ ಹುದ್ದೆ ನೇಮಕಾತಿ ಹಗರಣ ಸಂಬಂಧ ಇರುವ ಪ್ರಕರಣಗಳು ಇತ್ಯರ್ಥ ಆಗಬೇಕಿದೆ. ಇದರ ನಡುವೆ ಇನ್ನೂ 400ಕ್ಕೂ ಹೆಚ್ಚು ಪಿಎಸ್‌ಐಗಳ ನೇಮಕಾತಿಗೆ ಇಲಾಖೆಯಿಂದ ಪ್ರಸ್ತಾವನೆ ಬಂದಿದೆ. ಒಟ್ಟಾರೆ 1 ಸಾವಿರ ಪಿಎಸ್‌ಐ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ ಎಂದವರು ತಿಳಿಸಿದ್ದಾರೆ.